ಮೈಸೂರು: ಸಾಧನೆ ಸಾಧಕನ ಸ್ವತ್ತು ಬಡತನವಿದ್ದರೇನು, ಸಿರಿತನವಿದ್ದರೇನು ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಿಯೇ ತೀರಬಹುದು ಎಂಬುದನ್ನು ಗಾರೆ ಕಾರ್ಮಿಕನ ಪುತ್ರಿ ಇಂಚರಾ ತೋರಿಸಿ ಕೊಟ್ಟಿದ್ದಾಳೆ. ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಎಸ್.ಎಮ್.ಎಸ್. ಶಾಲೆಯ ವಿದ್ಯಾರ್ಥಿನಿ ಇಂಚರ ತಂದೆ ಮೋಹನಕುಮಾರ್ ಗಾರೆ ಕೆಲಸಗಾರ. ಈ ಇಂಚರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 616 ಅಂಕ ಗಳಿಸುವ ಮೂಲಕ ಇಡಿ ಪಿರಿಯಾಪಟ್ಟಣ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾಳೆ. ಇತ್ತ ತಂದೆ ಮೋಹನ್ ಕುಮಾರ್ ದಿನಗೂಲಿ ಮೇಲೆ ಗಾರೆ ಕೆಲಸ ಮಾಡಿದರೆ ತಾಯಿ ನೇತ್ರಾವತಿ ಎಲ್.ಐ.ಸಿ. ಏಜೆಂಟ್ ಆಗಿ ಕೆಲಸ ಮಾಡಿ ಕುಟುಂಬ ನಿರ್ವಹಿಸುತ್ತಾರೆ. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಇಂಚರಾಗೆ ತಂದೆ, ತಾಯಿ ತಾವು ಬಡವರಾಗಿದ್ದರು ಮಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಅದಕ್ಕೆ ಇಂಚರಾ ಕೂಡಾ ತಂದೆ, ತಾಯಿಯ ಇಚ್ಛೆಯಂತೆ ಕಷ್ಟಪಟ್ಟು ಓದಿ, ಕೊರೊನಾದ ಸಂಕಷ್ಟದ ಸಮಯದಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಪಿರಿಯಾಪಟ್ಟಣ ತಾಲೂಕಿಗೆ ಪ್ರಥಮ ಬಂದು ಗ್ರಾಮಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾಳೆ. ವಿದ್ಯಾರ್ಥಿನಿ ಇಂಚರಾ ಮುಂದೆ ವೈದ್ಯೆ ಯಾಗುವ ಇಂಗಿತ ವ್ಯಕ್ತಪಡಿಸಿದ್ದು. ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಅಂಕ ಗಳಿಸುವಲ್ಲಿ ಮೂಲ ಕಾರಣಿಭೂತರಾದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ (ಎಸ್.ಎಮ್. ಎಸ್) ಶಾಲೆಯ ಎಲ್ಲ ಶಿಕ್ಷಕರಿಗೂ ಅಭಿನಂದನೆ ತಿಳಿಸಿದ್ದಾಳೆ. ಇವಳ ಕನಸು ನನಸಾಗಲಿ ಮತ್ತು ಮುಂದೆ ಇವಳ ಜೀವನದಲ್ಲಿ ಯಶಸ್ವಿಯಾಗಲಿ ಎಂದು ಎಸ್.ಎಮ್. ಎಸ್ ಕಾಲೇಜಿನ ಶಿಕ್ಷಕ ವೃಂದ ಶುಭ ಹಾರೈಸುವುದರ ಜೊತೆಗೆ ಇಂಚರಾಗೆ ಕೈಲಾದ ಸಹಾಯವನ್ನು ಮಾಡೋಣ ಎಂದು ಹೇಳಿ ಅವಳಿಗೆ ಅಭಯ ಹಸ್ತ ಚಾಚಿದ್ದಾರೆ. ತಾಲೂಕಿಗೆ ಪ್ರಥಮ ಸ್ಥಾನ ಬಂದ ಕಾರಣ ಇಂಚರಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು ಶಾಲೆ ಹಾಗೂ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.