ಅತ್ಯಾಚಾರಿ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವಂತೆ : ತಹಸೀಲ್ದಾರ ಮೂಲಕ ಸಿಎಂ.ಗೆ ಮನವಿ

  • 14 Jan 2024 , 11:07 PM
  • Haveri
  • 149

ಬ್ಯಾಡಗಿ : ಬಾಲಕಿಯ ಸಾವಿಗೆ ಕಾರಣವಾದ ಆರೋಪಿ ಬಸೀರನನ್ನು ಗಲ್ಲಿಗೇರಿಸುವ ಮೂಲಕ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಬಿಜೆಪಿ ಹಾಗೂ ವಿಶ್ವಹಿಂದೂಪರಿಷತ್ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಷ್ಣುಕಾಂತ ಬೆನ್ನೂರು, ಧಾರವಾಡ ತಾಲೂಕು ಬೇಗೂರು ಗ್ರಾಮದ ಬಾಲಕಿ ಮೇಲೆ ಅತ್ಯಾಚಾರಗೈದ ಆರೋಪಿ ಯಾವುದೇ ಕಾರಣಕ್ಕೂ ಕಾನೂನಿನಿಂದ ತಪ್ಪಿಸಿಕೊಳ್ಳಬಾರದು. ಸರ್ಕಾರ ಹಾಗೂ ಪೋಲಿಸ ಇಲಾಖೆ ಹಾಗೂ ನ್ಯಾಯಾಲಯ ವಿಶೇಷ ತನಿಖೆ ನಡೆಸಿ ಆತನಿಗೆ ಮರಣದಂಡನೆ ವಿಧಿಸುವ ಮೂಲಕ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಅನ್ಯಾಯಕ್ಕೊಳಪಟ್ಟ ಕುಟುಂಬಕ್ಕೆ ಸರ್ಕಾರ 15 ಲ.ರೂ. ಪರಿಹಾರ ವಿತರಿಸಬೇಕು. ಆರೋಪಿಯ ಕುಟುಂಬದವರು ನೊಂದ ಕುಟುಂಬಕ್ಕೆ ಬೆದರಿಕೆ ಹಾಕಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ ಮಾತನಾಡಿ, ಮಹಿಳೆಯರನ್ನು ಗೌರವದಿಂದ ಕಾಣುವ ದೇಶದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಈ ಹಿಂದೆ ಸಾಕಷ್ಟು ಘಟನೆಗಳು ಜರುಗಿದ್ದು, ನ್ಯಾಯಾಲಯ ಇಂತವರಿಗೆ ತಕ್ಕ ಶಿಕ್ಷೆ ವಿಧಿಸಿದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಿದಾಗ ಇಂತಹ ಘಟನೆಗಳು ಜರುಗುವುದಿಲ್ಲ. ಆರೋಪಿಗಳ ರಕ್ಷಣೆಗೆ ಯಾರೂ ಮುಂದಾಗಬಾರದು ಎಂದು ಆಗ್ರಹಿಸಿದರಲ್ಲದೆ, ಮುಖ್ಯಮಂತ್ರಿಗಳು ಇನ್ನಷ್ಟು ಕಾನೂನು ಬಿಗಿಪಡಿಸಿ ಸಂತ್ರಸ್ಥೆಗೆ ನ್ಯಾಯ ಒದಗಿಸುವಂತೆ ಪತ್ರದ ಮೂಲಕ ಒತ್ತಾಯಿಸಿದರು. ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಶಿರೂರು, ಆರ್‍ಎಸ್‍ಎಸ್ ಮುಖಂಡರಾದ ಗುರುನಾಥ ಅಂಕಲಕೋಟಿ, ಶಿವಯೋಗಿ ಗಡಾದ, ಜಗದೀಶ ಸುತ್ತೂರುಮಠ, ವೀರಕನ್ನಡಿಗ ರಾಜ್ಯಾಧ್ಯಕ್ಷ ಚನ್ನಬಸಪ್ಪ ಶೆಟ್ಟರ, ಪಾಂಡುರಂಗ ಸುತಾರ ಇತರರು ಉಪಸ್ಥಿತರಿದ್ದರು.

Read All News