ಹಾವೇರಿ : ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿವೇಶನ ಸಮಸ್ಯೆಯಿದ್ದು, ಗುರ್ತಿಸಿದ ಸರ್ಕಾರಿ ಭೂಮಿಯಲ್ಲಿ ನಿವೇಶನಗಳ ನಕಾಶೆ ಸಿದ್ದಪಡಿಸಿ, ಸರ್ಕಾರಕ್ಕೆ ವರದಿ ನೀಡಲು ಭೂಮಾಪನ ಇಲಾಖೆಗೆ ಸೂಚಿಸಿದೆ ಎಂದು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ ಭವನ ಉದ್ಘಾಟನೆ ಹಾಗೂ ಡಾ.ಬಾಬು ಜಗಜೀವನರಾವ್ ಭವನದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದ ಅವರು ಮೋಟೆಬೆನ್ನೂರು ಗ್ರಾಮದಲ್ಲಿ ಬಹುತೇಕ ಬಡವರು ಸ್ವಂತ ನಿವೇಶನ ಹಾಗೂ ಮನೆಯಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಅರ್ಹಫಲಾನುಭವಿಗಳನ್ನು ಗ್ರಾಮ ಪಂಚಾಯಿತಿ ಮೂಲಕ ಗುರ್ತಿಸಿ ಗ್ರಾಮದ ಕ್ವಾಟಿ ಗುಡ್ಡದ ಬಳಿ 6 ಎಕರೆ ಸರ್ಕಾರಿ ಭೂಮಿಯಲ್ಲಿ ಬಡವರಿಗೆ ನಿವೇಶನ ಸಹಿತ ಮನೆ ನಿರ್ಮಿಸಿಕೊಡಲಾಗುವುದು ಎಂದರು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಾಲೋನಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುದಾನದಲ್ಲಿ ಶೇ.24 ರಷ್ಟು ಹಣ ಮೀಸಲಿಟ್ಟಿದೆ.
ಈ ಹಣದಲ್ಲಿ ಗುಣಮಟ್ಟದ ರಸ್ತೆ, ಚರಂಡಿ ಹಾಗೂ ಸಮುದಾಯ ಭವನ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರ ಎಲ್ಲ ವರ್ಗಗಳ ಹಿತಕಾಯಲು ಬದ್ದವಾಗಿದೆ. ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ 50 ಲ.ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ ಭನವ ನಿರ್ಮಿಸಿದೆ. ಈಗ 20 ಲ.ರೂ.ವೆಚ್ಚದಲ್ಲಿ ಡಾ.ಬಾಬು ಜಗಜೀವನರಾವ್ ಭನವ ನಿರ್ಮಿಸಲು ಭೂಮಿ ಪೂಜೆ ಮಾಡಿದ್ದು, ಇನ್ನಷ್ಟು ಯೋಜನೆಗಳನ್ನು ಹಿಂದುಳಿದ ಕಾಲೋನಿಗೆ ಮಂಜೂರು ಮಾಡಿಸುವೆ ಎಂದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡಿವೆಪ್ಪ ಕುರಿಯವರು ಅಂಬೇಡ್ಕರ ಜೀನವ ಚರಿತ್ರೆ ಕುರಿತು ಸ್ವರಚಿತ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಯಲ್ಲನಗೌಡ್ರ ಕರೇಗೌಡ್ರ, ಪೂರ್ಣಿಮಾ ಆನ್ವೇರಿ, ಜಿ.ಪಂ.ಸದಸ್ಯೆ ಅನುಸೂಯಾ ಕುಳೇನೂರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೆಶಕ ಪುಂಡಲೀಕ ಮಾನನವರ, ಉತ್ತರ ಕರ್ನಾಟಕ ರೈತಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಉಪ್ಪಿನ, ಮುಖಂಡರಾದ ಶಿವಬಸಪ್ಪ ಕುಳೇನೂರು, ವಿಜಯಭರತ ಬಳ್ಳಾರಿ, ನಾಗರಾಜ ಹಾವನೂರು, ನಾಗರಾಜ ಬಳ್ಳಾರಿ, ಚಂದ್ರಪ್ಪ ಆನ್ವೇರಿ, ಇಂಜಿನೀಯರ್ ಎಚ್.ಡಿ.ಶಾಂತಕುಮಾರ ಇತರರಿದ್ದರು.