ಸರ್ಕಾರದ ನಿಯಮಗಳನ್ನು ಪಾಲಿಸಿ ಹಬ್ಬಗಳನ್ನು ಆಚರಿಸಿ: ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

  • 14 Jan 2024 , 9:25 PM
  • Haveri
  • 112

ಹಾವೇರಿ: ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಕೋವಿಡ 19 ವೈರಸ್‍ನಿಂದಾಗಿ ಸಾಂಪ್ರದಾಯಿಕ ಹಬ್ಬಗಳ ಆಚರಣೆಯಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು ಇದಕ್ಕೆ ಜನರು ಸಹಕರಿಸಬೇಕು ಎಂದು ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಇಲ್ಲಿನ ರಾಣೇಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಬಾರಿ ಸಾರ್ವಜನಿಕ ಗಣಪತಿ ಹಾಗೂ ಮೊಹರಂ ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸಲು ಸರ್ಕಾರ ಕೆಲವು ನಿರ್ಭಂದನೆಗಳ ಜೊತೆ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಟ್ಟಿದೆ. ಗಣೇಶ ಸಮಿತಿಯವರು ಈ ಬಾರಿ ತಮ್ಮ ಪ್ರದೇಶದ ದೇವಸ್ಥಾನ ಅಥವಾ ಉದ್ಯಾನಗಳಲ್ಲಿ ಸರಳವಾಗಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿದೆ. ಸರಕಾರದ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪ್ರತಿಯೊಬ್ಬರೂ ಪಾಲಿಸಬೇಕು. ಯಾರಾದರೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕಟ್ಟು ನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕಡಕ್ ಎಚ್ಚರಿಕೆ ನೀಡಿದರು. ಗಣೇಶ ಪ್ರತಿಷ್ಠಾಪಿಸಿದ ಜಾಗದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು. ಹೆಚ್ಚಾಗಿ ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ನಗರಗಳಲ್ಲಿ ಗಣೇಶ ಪ್ರತಿಷ್ಠಾಪಿಸುವರು ನಗರಸಭೆ, ಹೆಸ್ಕಾಂ ಹಾಗೂ ಪೋಲಿಸ್ ಇಲಾಖೆಯಿಂದ ಪರವಾನಗಿ ಪಡೆದು ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಹಾಗೂ ಮಾನವೀಯತೆ ಆಧಾರದ ಮೇಲೆ ಯಾರಿಗೂ ತೊಂದರೆಯಾಗದಂತೆ ಹಬ್ಬಗಳನ್ನು ಆಚರಿಸೋಣ ಎಂದರು. ಈ ಸಂದರ್ಭದಲ್ಲಿ ಸಿಪಿಐ ಲಿಂಗನಗೌಡ ನೆಗಳೂರ, ವಿರುಪಾಕ್ಷಪ್ಪ, ಪಿಎಸ್‍ಐಗಳಾದ ಮೇಘರಾಜ, ಪ್ರಭು ಕೆಳಗಿನಮನಿ, ನಗರಸಭಾ ಸದಸ್ಯರುಗಳಾದ ಗಂಗಮ್ಮ ಹಾವನೂರ, ನಿಂಗರಾಜ ಕೋಡಿಹಳ್ಳಿ, ಸಿದ್ದಪ್ಪ ಬಾಗಿಲದವರ, ನೂರುಲ್ಲಾಖಾಜಿ, ಅಂಜುಮನ್ ಸಂಸ್ಥೆ ಮತ್ತು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Read All News