ಲೋಕಲ್ ವಿವ್ಯೂ ರಿಯಾಲಿಟಿ ಚೆಕ್; ಬಿದ್ದ ಮನೆಗಳು, ಹೈರಾಣ ಆದ ಸಂತ್ರಸ್ತರು, ಜನರ ಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸದ ಅಧಿಕಾರಿಗಳು

  • 30 Dec 2023 , 8:33 AM
  • Belagavi
  • 152

ವಿಶೇಷ ವರದಿ:ಈರಪ್ಪಾ ಚಾಪಗಾಂವ, ಬೆಳಗಾವಿ 

ಬೆಳಗಾವಿ: ಮೊದ್ಲ ಈ ಕೋರೊನಾಕ ಅಂಜಿ ಎಲ್ಲಿ ಹೋಗಿಲ್ಲ ರ್ರಿ, ಅದ್ರಾಗ ಈ ಮಳಿ ಒಂದ ಬಂದ ನಮ್ಮಗ ಬಾಳ ತೊಂದ್ರಿ ಕೊಟೈತಿ, ಜೋರ ಬಂದ ಮಳಿ, ಗಾಳಿಯಿಂದ ಮನಿ ಎಲ್ಲಾ ಬಿದ್ದಾವ್ರಿ, ಎಲ್ಲಿ ಹೋಗುದು ? ಎಲ್ಲಿ ಇರೋದು ತಿಳಿವಲ್ತು ಸಂಬಂಧಿಕರ ಮನ್ಯಾಗರಾ ಎಸ್ಟ್ ದಿವಸ ಇರೋದು ? ಬೇರೆದವರ ಕಟ್ಟಿ ಮೇಲಾ ಜೀವನ ನಡಸಾಕತೆವ, ಸಣ್ಣ ಸಣ್ಣವು ಹುಡುಗೋರ್ ಅದಾವು ಏನ ಮಾಡಬೇಕ ಗೋತಾಗವಲ್ತು... ಇವೆಲ್ಲಾ ಮಾತುಗಳು ಕೇಳಿ ಬಂದಿದ್ದು ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ.

 

ಇತ್ತಿಚೆಗೆ ಸುರಿದ ಭಾರಿ ಮಳೆಗೆ ಅಕ್ಷರಶಃ ಇಲ್ಲಿನ ಜನರ ಬದುಕು ಹೈರಾಣ ಆಗಿದೆ. ಇದೊಂದೇ ಗ್ರಾಮದಲ್ಲಿ ಹತ್ತಕ್ಕೂ ಅಧಿಕ ಮನೆಗಳು ಬಿದ್ದಿವೆ ಕೆಲವರು ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಇನ್ನು ಕೆಲವರು ಆ ಬಿದ್ದ ಮನೆಯಲ್ಲಿಯೇ ಅಂಗೈಯಲ್ಲಿ ಜೀವ ಹಿಡಿದು ಬದುಕಿನ ಬಂಡಿಯನ್ನು ನಡೆಸುತ್ತಿದ್ದಾರೆ. ಕಳೆದ ಭಾರಿಯ ಪ್ರವಾಹಕ್ಕೆ ಅಕ್ಷರಶಃ ಕುಂದಾನಗರಿ ಬೆಳಗಾವಿ ನಲುಗಿ ಹೋಗಿತ್ತು ಇನ್ನೆನ್ನು ಅದೆಲ್ಲ ಕಳೆದು ಹೋಗಿ ಹೊಸ ಜೀವನ ನಡೆಸಬೇಕು ಅಂದು ಕೊಳ್ಳುವಸ್ಟರಲ್ಲಿ ಮತ್ತೆ ಮೇಘರಾಜ ಆರ್ಭಟಿಸಿದ್ದಾನೆ. ಕಳೆದ ಭಾರಿ ಬಿದ್ದ ಮನೆಗಳ ಸಂತ್ರಸ್ತರಿಗೆ ಇನ್ನು ಪರಿಹಾರ ಧನ ಸರಿಯಾಗಿ ಸಿಕ್ಕಿಲ್ಲ, ಸರ್ವೇ ಮಾಡುವಲ್ಲಿ ಸ್ಥಳಿಯ ಅಧಿಕಾರಿಗಳು ತಾರತ್ಯಮ ಧೋರಣೆ ಮಾಡಿದ್ದಾರೆ ಎಂಬ ಆರೋಪ, ಪ್ರತ್ಯಾರೋಪಗಳ ನಡುವೆ ಮತ್ತೆ ಜನರ ಬದುಕು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಷ್ಟೆಲ್ಲಾ ಆದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾರು ನಮ್ಮ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ ಇಂದು ಅಥವಾ ನಾಳೆ ಮತ್ತೆ  ಈ ಮನೆ ಬೀಳುವ ಹಂತದಲ್ಲಿದೆ, ಇಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದೇವೆ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇವೆ ಏನು ಮಾಡುಬೇಕೆಂದು ತಿಳಿಯುತ್ತಿಲ್ಲ ಎಂದು ಅಸಹಾಯಕತೆಯ ಮಾತುಗಳನ್ನು ಆಡುತ್ತಾರೆ ವೃದ್ಧೆ ಮಲ್ಲಮ್ಮ ಬಡಿಗೇರ... 

    

ಸಾಕಷ್ಟು ಸಾಲಾಸೋಲ ಮಾಡಿ ಮನೆ ಕಟ್ಟಿಕೊಂಡಿದ್ವಿ, ಭಾರಿ ಮಳೆಗೆ ಎಲ್ಲ ಮನೆಯೂ ಕುಸಿತವಾಗಿದೆ. ಬೇರೆಯವರು ನಮಗೆ ಆಶ್ರಯ ನೀಡಿದ್ದಾರೆ. ಹೊಲದಲ್ಲಿ ಕೂಲಿ ಕೆಲಸ ಮಾಡ್ತೀವಿ ಆದರಿಂದಲೇ ನಮ್ಮ ಜೀವನ ನಡೆಸುತ್ತಿದ್ದೇವೆ. ಮನೆ ಇಲ್ಲದೇ ಜೀವನ ಅತಂತ್ರವಾಗಿದೆ. ಸರಕಾರ ಈ ಕೂಡಲೇ ಪರಿಹಾರ ನೀಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಪುಸ್ತಕಗಳು ಮಳೆ ನೀರಿಗೆ ನೆನೆದಿವೆ, ಮುಂದೆ ಹೇಗೆಂಬುದು ಗೊತ್ತಾಗುತ್ತಿಲ್ಲ ಎಂದು ಲೋಕಲ್ ವಿವ್ಯೂಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ ರೇಣುಕಾ ತಳವಾರ...

    

ಕಳೆದ ಭಾರಿ ಸುರಿದ ಮಳೆಯಿಂದಾಗಿ ಮನೆಗಳು ಬಿದ್ದಿವೆ ಅವುಗಳಿಗೆ ಇನ್ನು ಸರಿಯಾಗಿ ಪರಿಹಾರ ಸಿಕ್ಕಿಲ್ಲ ಇದರ ನಡುವೇ ಮತ್ತೆ ಈಗ ಊರಲ್ಲಿ ಮನೆಗಳು ಬಿದ್ದಿವೆ ಇಲ್ಲಿ ಯಾರೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ ನಾಲ್ಕು ಭಾರಿ ಸಂಸದರಾಗಿ ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ರೈಲ್ವೆ ಸಚಿವರಾಗಿ ಕೆಲಸ ನಿರ್ವಹಿಸುತ್ತಿರುವ ಸುರೇಶ ಅಂಗಡಿ ಇದು ವರೆಗೂ ಒಂದು ಭಾರಿಯು ಭೇಟಿ ನೀಡಿಲ್ಲ , ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಲು ಹಣವಿದೆ ಆದರೆ ಇಲ್ಲಿ ಬಡ ಜನರ ಮನೆಗಳನ್ನು ನಿರ್ಮಾಣ ಮಾಡಲು ಹಣವಿಲ್ಲ  ಎಂದು ತಮ್ಮ ಆಕ್ರೋಶ  ವ್ಯಕ್ತಪಡಿಸಿದ್ದಾರೆ ಸ್ಥಳೀಯರಾದ ರಮೇಶ ಪಾಟೀಲ್

 

ಒಟ್ಟಿನಲ್ಲಿ ಇದು ಕೇವಲ ಈ ಬಡಾಲ ಅಂಕಲಗಿ ಗ್ರಾಮದ ಸಮಸ್ಯೆ ಅಲ್ಲಾ ಈ ಕುಂದಾನಗರಿ ಬೆಳಗಾವಿ ಜಿಲ್ಲೆಯ ಹಲವು ತಾಲೂಕು ಅಲ್ಲಿರುವ ಗ್ರಾಮಗಳ ಸಮಸ್ಯೆಯಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿ ಆದಷ್ಟು ಬೇಗ ಅವರ ಸಮಸ್ಯೆಯನ್ನು ಬಗೆಹರಿಸಲಿ ಎಂಬುದು ನಮ್ಮ ಆಶಯವಾಗಿದೆ.

Read All News