ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಯತ್ನದಿಂದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸುಮಾರು ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ಶ್ರೀ ಗ್ರಾಮದೇವಿ ಮಂದಿರದ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದಾರೆ.

ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದ್ದ ಕ್ಷೇತ್ರವನ್ನು ಕಳೆದ ಎರಡೂವರೆ ವರ್ಷದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಅವರ ಬೆನ್ನಿಗೆ ಇಡೀ ಕ್ಷೇತ್ರದ ಜನರು ನಿಂತಿದ್ದು, ಮುಂದೆಯೂ ಸಂಪೂರ್ಣ ಬೆಂಬಲ ನೀಡಬೇಕು. ಇಂತಹ ಜನಪ್ರತಿನಿಧಿ ರಾಜ್ಯದಲ್ಲೇ ಸಿಗುವುದು ಅಪರೂಪ ಸರಕಾರ ಯಾವುದೇ ಇರಲಿ, ಲಕ್ಷ್ಮಿ ಹೆಬ್ಬಾಳಕರ್ ಅಭಿವೃದ್ಧಿ ಯೋಜನೆಗಳನ್ನು ತರುತ್ತಿದ್ದಾರೆ. ಬೇರೆ ಬೇರೆ ಇಲಾಖೆಗಳಿಂದ ಅನುದಾನ ತರುವ ಮೂಲಕ ಬೇರೆಲ್ಲ ಶಾಸಕರಿಗಿಂತ ಮುಂದಿದ್ದಾರೆ. ಸಾರ್ವಜನಿಕರಿಗೆ ದಿನದ 24 ಗಂಟೆಯೂ ಲಭ್ಯವಿರುವ ಶಾಸಕರು ಇವರು. ಹಾಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಇವರೇ ಶಾಶ್ವತವಾಗಿ ಶಾಸಕರಾಗಿರಲಿ ಎಂದು ನಾವೆಲ್ಲ ಗ್ರಾಮದೇವಿಯಲ್ಲಿ ಪ್ರಾರ್ಥಿಸೋಣ ಎಂದು ಅವರು ಹೇಳಿದರು. ಯುವ ಮುಖಂಡ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕ್ಷೇತ್ರದ ಜನರೆಲ್ಲರ ಸಹಕಾರದಿಂದಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರು ದಿನದ 24 ಗಂಟೆಯೂ ಕ್ಷೇತ್ರದ ಅಭಿವೃದ್ಧಿ, ಜನರ ಕಾಳಜಿ ಹೊರತಾಗಿ ಬೇರೇನನ್ನೂ ಯೋಚಿಸುವುದಿಲ್ಲ. ತಮ್ಮ ಸ್ವಂತ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಿಮ್ಮೆಲ್ಲರ ಸಹಕಾರ ಮುಂದೆಯೂ ಇದೇ ರೀತಿ ಇರಲಿ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರು, ರಾಮನಗೌಡ ಪಾಟೀಲ, ಬಸವಂತ ನಾಯಕ, ಅರ್ಜುನ ಅರ್ಜುನವಾಡಿ, ಸಿದ್ದಪ್ಪ ಚಾಪಗಾವಿ, ರಾಮಪ್ಪ ಕೊಳಪ್ಪನವರ, ರಾಮಪ್ಪ ಶಿಗೀಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.