ಬೆಳಗಾವಿ : ತಾಲೂಕಿನ ಪಿರನವಾಡಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅಭಿಮಾನಿಗಳು ರಾತ್ರೋರಾತ್ರಿ ಕಾನೂನು ಬಾಹಿರವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಪರಿಣಾಮವಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸೇರಿ 20 ಜನರ ವಿರುದ್ಧ ಕೇಸ್ ದಾಖಲಾಗಿದೆ. ರಾಯಣ್ಣನ ಜಯಂತಿಯ ದಿನವಾದ ಅಗಸ್ಟ 15ರಂದು ಸ್ಥಳೀಯ ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಪೊಲೀಸರು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದರು. ಅನುಮತಿ ಪಡೆಯದೇ ಪ್ರತಿಮೆ ಸ್ಥಾಪಿಸಲಾಗಿದೆ ಎನ್ನುವುದು ಪೊಲೀಸರ ವಾದವಾಗಿತ್ತು. ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದವು. ವಿವಾದವನ್ನು ಆ.29ರಂದು ಬಗೆಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರತಿಭಟನಾಕಾರರಿಗೆ ನಿನ್ನೆಯೇ ಭರವಸೆ ನೀಡಿದ್ದರು. ದಿ. 29!ರಂದು ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಬೆಳಗಾವಿಗೆ ಬರುವವರಿದ್ದರು. ಆದರೆ ಈಗ ಅಭಿಮಾನಿಗಳು ನಿನ್ನೆ ರಾತ್ರೋರಾತ್ರಿ ಕಾನೂನು ಬಾಹಿರವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೆ ಗೊಂದಲಕ್ಕೆ ಕಾರಣವಾಗಿದೆ.