ಬ್ಯಾಡಗಿ: ದೇಶ್ಯಾದಂತ ಗೋಹತ್ಯೆ ನಿಷೇಧಿಸುವ ಮೂಲಕ ಬಹು ಜನರ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಡೇರಿಸುವಂತೆ ವೀರಕನ್ನಡಿಗ ಸಂಘಟನೆ ರಾಜ್ಯಾಧ್ಯಕ್ಷ ಚನ್ನಬಸವಣ್ಣ ಶೆಟ್ಟರ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ಒತ್ತಾಯಿಸಿದ್ದಾರೆ. ಭಾರತದಲ್ಲಿ ಗೋವನ್ನು ದೈವಸ್ವರೂಪವಾಗಿ ಕಾಣುತ್ತಿದ್ದೇವೆ. ಗೋವಿಗೆ ಸತಾತನ ಧರ್ಮದಲ್ಲಿ ವಿಶೇಷವಾದ ಸ್ಥಾನಮಾನ ಕಲ್ಪಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅಮೃತ ನೀಡಿ, ಕಾಪಾಡಿದ ಗೋತಾಯಿಯ ಸ್ಥಿತಿ ಭಾರತದಲ್ಲಿ ಹೀನವಾಗಿದೆ. ಎಲ್ಲೆಡೆ ಸಿಕ್ಕಾಪಟ್ಟೆ ಕಸಾಯಿ ಖಾನೆಗಳನ್ನು ತೆರೆದು ಗೋವುಗಳನ್ನು ಹತ್ಯೆ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಈ ಕುರಿತು ಪ್ರಧಾನಮಂತ್ರಿಗಳು ಇತ್ತ ಗಮನ ಹರಿಸಿ ಗೋರಕ್ಷರ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ದೇಶದಲ್ಲಿ ಸಾಧುಸಂತರು ಸರ್ಕಾರಗಳಿಗೆ ಒತ್ತಾಯಿಸುತ್ತಾ ಬಂದಿದ್ದರೂ ಈವರೆಗೂ ಬೇಡಿಕೆ ಈಡೇರಿಲ್ಲ, ಇನ್ಮುಂದೆ ಕೇಂದ್ರ ಸರ್ಕಾರ ಕಠಿಣವಾದ ಕಾನೂನು ಜಾರಿಗೊಳಿಸುವ ಮೂಲಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಧಿಕಾರಿಗಳು ಸರ್ಕಾರದ ಆದೇಶ ಹಾಗೂ ಕಾನೂನುಗಳನ್ನು ಪಾಲಿಸುವ ಮೂಲಕ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.