ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಇಂದು ಸ್ವಂತ ಜಮೀನನಲ್ಲಿ ಬೆಳೆ ಸಮೀಕ್ಷೆ ಮೋಬೈಲ್ ಆ್ಯಪ ಮೂಲಕ ಮಾಹಿತಿಯನ್ನು ಅಪ್ಲೋಡ್ ಮಾಡಿದ ಕರ್ನಾಟಕ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ಒಂದು ವಿನೂತನ ಬೆಳೆ ಸಮೀಕ್ಷೆ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಒಂದು ಮಾದರಿ ಕಾರ್ಯವನ್ನು ಕರ್ನಾಟಕ ಸರಕಾರ ಮಾಡಿದೆ. ಈ ಯೋಜನೆಯು ಪ್ರಕೃತಿ ವಿಕೋಪದಡಿ ಅನಾವೃಷ್ಠಿ, ಅತೀವೃಷ್ಠಿ, ಪ್ರವಾಹ ಸಂದರ್ಭಗಳಲ್ಲಿ ರೈತರ ಬೆಳೆ ಹಾನಿ ಕುರಿತು ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಅಡಿಯಲ್ಲಿ ಪರಿಹಾರ ನೀಡಲು ಅರ್ಹ ಫಲಾನುಭವಿಗಳನ್ನು ಗುರುತಿಸಿ, ಬೆಳೆ ವಿಮಾ ಯೋಜನೆಯಡಿ ಬೆಳೆಗಳ ವಿವರ ಪರಿಶೀಲನೆಗೆ ಈ ಸಮೀಕ್ಷೆ ಅನುಕೂಲವಾಗಲಿದೆ ಎಂದರು.
ಕನಿಷ್ಠ ಬೆಂಬಲ ಬೆಲೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಈ ಸಮೀಕ್ಷೆ ಅನುಕೂಲವಾಗಿದೆ. ಪ್ರತಿ ವರ್ಷ ಈ ಎಲ್ಲ ಬೆಳೆ ವಿವರಗಳ ಮಾಹಿತಿಗಳು ಆರ್.ಟಿ.ಸಿ (ಉತಾರ)ನಲ್ಲಿ ದಾಖಲಾಗುತ್ತವೆ. ಇದರಿಂದಾಗಿ ಇಡಿ ರಾಜ್ಯದಲ್ಲಿ ಸಂಪೂರ್ಣ ಬೆಳೆಗಳ ವಿವರ ಸರ್ಕಾರಕ್ಕೆ ಲಭ್ಯವಾಗತ್ತದೆ. ಇದರಿಂದಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲಿಕ್ಕೆ ಸರಕಾರ ಯೋಜನೆ ತಯಾರಿಸಲು ಇದು ಉಪಯುಕ್ತವಾಗಿದೆ, ಹೀಗಾಗಿ ರೈತರು 2020-21ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆಯಲ್ಲಿ ತಾವು ಖುದ್ದಾಗಿ ಭಾಗವಹಿಸುವ ಮೂಲಕ ಅಥವಾ ಅನುಭವಸ್ಥರ ಸಹಾಯಪಡೆದು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ನಲ್ಲಿ ನಿಗದಿತ ಸಮಯದೊಳಗೆ ಅಪ್ಲೋಡ್ ಮಾಡಲು ಜನರಲ್ಲಿ ವಿನಂತಿಸಿದರು. ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ 14,82,566 ಪ್ಲಾಟ್‌ಗಳ ಪೈಕಿ 4,31,801 ಪ್ಲಾಟ್‌ಗಳ ಬೆಳೆ ಸಮೀಕ್ಷೆ ಮಾಡಿ ರಾಜ್ಯದಲ್ಲಿ ನಂಬರ 1 ಜಿಲ್ಲೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗೋಕಾಕ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ ಎಂ ನದಾಫ್, ಅರಭಾವಿ ಕೃಷಿ ಅಧಿಕಾರಿ ಶಂಕರ ಹಳ್ಳದಮನಿ, ಮೂಡಲಗಿ ಕೃಷಿ ಅಧಿಕಾರಿ ಪರಸಪ್ಪ ಹುಲಗಬಾಳೆ ಹಾಗೂ ಕಲ್ಲೋಳಿಯ ರೈತರು ಉಪಸ್ಥಿತರಿದ್ದರು.