ಬೆಳಗಾವಿ : ರಾಜ್ಯದಲ್ಲಿ ತಲೆ ಎತ್ತಿರುವ ಡ್ರಗ್ಸ್ ದಂದೆ ಯುವ ಜನತೆಯನ್ನು ಹಾಳು ಮಾಡುತ್ತಿದ್ದು, ಯುವ ಶಕ್ತಿಯ ನಾಶಕ್ಕೆ ಕಾರಣವಾಗುತ್ತಿದೆ. ಈ ಕೂಡಲೆ ಸರ್ಕಾರ ಕಠಿಣ ತನಿಕೆ ಮಾಡಿ ಡ್ರಗ್ಸ್ ದಂದೆಯಲ್ಲಿ ತೊಡಗಿಕೊಂಡಿರುವವರಿಗೆ ದೇಶ ದ್ರೋಹ ಪ್ರಕರಣ ದಾಖಲಿಸುವಂತೆ ನಿನ್ನೆ ಗುರುವಾರದಂದು ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗ ವತಿಯಿಂದ, ಜಿಲ್ಲಾ ಪೋಲಿಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸ್ಯಾಂಡಲವುಡನೊಂದಿಗೆ ನಂಟಿರುವ ಬೃಹತ್ ಡ್ರಗ್ಸ್ ದಂದೆ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಭೇದಿಸಿರುವ ಬಗ್ಗೆ ಮತ್ತು ಡ್ರಗ್ಸ್ ಜಾಲದ ಹಿಂದೆ ಸಮಾಜದಲ್ಲಿ ಇರುವಂಥ ಪ್ರತಿಷ್ಠಿತ ಪ್ರಭಾವಿ ಶ್ರೀಮಂತ ಕುಟುಂಬಗಳ ವ್ಯಕ್ತಿಗಳು, ಸಿನಿಮಾ ನಟ, ನಟಿಯರು, ರಾಜಕಾರಣಿಗಳ ಮಕ್ಕಳು ಇರುವ ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಮಾಜಕ್ಕೆ ಮಾದರಿ ಆಗಬೇಕಾದವರೆಲ್ಲ ಇಂತಹ ಚಟಗಳಿಗೆ ಅಂಟಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಈ ಡ್ರಗ್ಸ್ ಜಾಲದ ಪಿಡುಗಿನಿಂದ ದೇಶದ ಯುವ ಶಕ್ತಿಯನ್ನು ರಕ್ಷಿಸಿಕೊಳ್ಳಲು ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಕ್ತಿಮೀರಿ ಕೆಲಸ ಮಾಡಬೇಕಾಗಿದೆ. ರಾಜ್ಯ ಸರ್ಕಾರ ಡಗ್ಸ್ ನಿಯಂತ್ರಣಕ್ಕೆ ಕಠಿಣವಾದ ಕಾನೂನುಗಳನ್ನು ರೂಪಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಬೇಕು.

ಈಗಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 2014 ರಲ್ಲಿ ಶಾಲಾ - ಕಾಲೇಜು ಕ್ಯಾಂಪಸ್ ಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಡೀ ದೇಶಾದ್ಯಂತ "ನಶಾಮುಕ್ತ ಭಾರತ" ಎಂಬ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕ್ಯಾಂಪಸ್‌ಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಿತ್ತು. ಆದರೆ ಇತ್ತೀಚಿಗೆ ಪೊಲೀಸರ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಹಲವು ಮಾಹಿತಿಗಳು ಹೊರಬಿದ್ದ ವಿಷಯ ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವಕರು ಮಾದಕ ವ್ಯಸನ ಜಾಲದ ಗ್ರಾಹಕರಾಗಿದ್ದಾರೆ ಎಂಬ ಆಘಾತಕಾರಿ ಅಂಶಗಳು ಕೇಳಿಬರುತ್ತಿರುವುದು ನಿಜಕ್ಕೂ ವಿಷಾದನೀಯ.

ಬೆಂಗಳೂರಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಇಲಾಖೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ ಮತ್ತು ಈ ಜಾಲದಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಇರುವುದರಿಂದ ಯಾವುದೇ ಒತ್ತಡಕ್ಕೆ ಮಣಿಯದೆ ಗೃಹ ಇಲಾಖೆ ಪೋಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ ನೀಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಮನವಿ ಮೂಲಕ ಆಗ್ರಹಿಸಿರು.

ಈ ಸಂದರ್ಭದಲ್ಲಿ ಅಭಾವಿಪ ಸದಸ್ಯರಾದ ರೋಹಿತ ಉಮನಾಬಾದಿಮಠ, ಕಾರ್ತಿಕ ಶಿಗ್ಲಿ, ಚಿದಾನಂದ, ಸಂತೋಷ, ಭೂಷಣ, ವೃಷಭ, ಪ್ರಜ್ಞಾ, ಪ್ರಮೋದ್, ಶುಭಮ್, ಸಮೇದ, ಶಿವಾನಂದ, ಅನಿಲ ಪಾಟೀಲ, ಅಶ್ವಿನಿ, ರಿತೀಕಾ ಉಪಸ್ಥಿತರಿದ್ದರು.