ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಪಟ್ಟಣದಲ್ಲಿ ಮೇಡ್ಲೇರಿ ರಸ್ತೆಯಲ್ಲಿರುವ ಓಂ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆಯನ್ನು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ ಜನರ ಬೇಜವಾಬ್ದಾರಿಯಿಂದಾಗಿ ಕೋರೋನ್ ವೈರಸ್ ರೋಗ ಉಲ್ಬಣಗೊಳ್ಳುತ್ತಿದೆ. ಸರ್ಕಾರ ಸಾಕಷ್ಟು ಕ್ರಮ ಕೈಗೊಂಡರೂ ಜನರ ಸಹಕಾರವಿಲ್ಲದೆ ಕಾರ್ಯ ಸಾಧಿಸಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಜನರು ಸ್ವಲ್ಪ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೂ ಕೂಡಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಲಕ್ಷಣವಿಲ್ಲದರೂ ಪರೀಕ್ಷೆ ಮಾಡಿಸಿಕೊಂಡರೆ ಯಾವುದೇ ತೊಂದರೆಯಿಲ್ಲ. ಆದರೆ, ಕೋವಿಡ್ ತಪಾಸಣೆಗೆ ಯಾರೂ ಹಿಂಜರಿಯಬಾರದು, ಇದಕ್ಕೆ ಜನರು ಸಹಕಾರ ನೀಡದೆ ಹೋದರೇ ಪ್ರಸುತ್ತ 5 ಸಾವಿರ ಇರುವ ಪಾಸಿಟವ್ ಕೇಸ್‍ಗಳು ಮುಂದಿನ ದಿನದಲ್ಲಿ 8 ಸಾವಿರ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಕರೊನಾ ತಡೆಗಟ್ಟುವ ಸಲುವಾಗಿ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿನಂತಿಸಿಕೊಂಡರು. ಕೊರೊನಾ ಸೋಂಕು ತಡೆಗೆ ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಯುವಿಕೆ ಹಾಗೂ ಮಾಸ್ಕ್ ಬಳಕೆ ಪ್ರತಿಯೊಬ್ಬರ ದೈನಂದಿನ ಜವಾಬ್ದಾರಿಯಾಗಬೇಕು. ಓಂ ಹಾಸ್ಪಿಟಲ್‍ನವರು ಕೋವಿಡ್-19 ರೋಗಿಗಳಿಗಾಗಿ 50 ಬೆಡ್‍ಗಳ ಆಸ್ಪತ್ರೆ ಸಿದ್ಧಪಡಿಸಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಇನ್ನು ಹೆಚ್ಚು ಖಾಸಗಿ ವೈದ್ಯರುಗಳು ರೋಗದ ವಿರುದ್ದ ಹೋರಾಟ ನಡೆಸಬೇಕಿದೆ. ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಐಎಮ್‍ಐ ಸಂಘಟನೆ ಇನ್ನು ಹೆಚ್ಚು ಕೋವಿಡ್-19 ಆಸ್ಪತ್ರೆಯ ತೆರೆಯಲು ಮುಂದೆ ಬಂದರೇ ಜಿಲ್ಲಾಡಳಿತ ಸಹಕಾರ ನೀಡಲಿದೆ. ಜಿಲ್ಲೆಯಲ್ಲಿ ಪ್ರಥಮವಾಗಿ ರಾಣೇಬೆನ್ನೂರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿರುವುದು ಜನರಿಗೆ ಹೆಚ್ಚು ಅನುಕೂಲವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರ್ಯಾಪೀಡ್ ಟೆಸ್ಟ್ ಸೆಂಟರಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಓಂ ಸಮೂಹ ಸಂಸ್ಥೆ ಕಾರ್ಯದರ್ಶಿ ಮನೋಜ ಸಾವಕಾರ ಮಾತನಾಡಿ, ನಮ್ಮ ತಂದೆಯವರಿಗೆ ಕರೊನಾ ಪಾಸಿಟಿವ್ ಬಂದಾಗ ಚಿಕಿತ್ಸೆಗಾಗಿ ನಾನೇ ತೊಂದರೆ ಅನುಭವಿಸಿದ್ದೇನೆ. ಇದರಿಂದ ಇತರರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಕೋವಿಡ್-19 ಆಸ್ಪತ್ರೆ ಆರಂಭಿಸಿದ್ದೇನೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಪಂ ಸಿಇಒ ರಮೇಶ ದೇಸಾಯಿ, ಡಿಎಚ್‍ಒ ಡಾ. ರಾಜೇಂದ್ರ ದೊಡ್ಡಮನಿ, ನಗರಸಭೆ ಆಯುಕ್ತ ಡಾ.ಎನ್.ಮಹಾಂತೇಶ, ತಹಸೀಲ್ದಾರ್ ಬಸನಗೌಡ ಕೋಟೂರು, ತಾಪಂ ಇ ಒ ಎಸ್.ಎಂ. ಕಾಂಬಳೆ, ಓಂ ಸಮೂಹ ಸಂಸ್ಥೆ ಅಧ್ಯಕ್ಷೆ ರುಕ್ಮಿಣಿ ಸಾವಕಾರ, ಡಾ.ನಾಗರಾಜ ದೊಡ್ಮನಿ, ಡಾ.ರವಿ ಕುಲ್ಕರ್ಣಿ, ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.