ರಾಣೇಬೆನ್ನೂರ: ಭಾರತ ನೆಲದಲ್ಲಿ ಗುರು ಪರಂಪರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂತಹ ಗೌರವ, ಮನ್ನಣೆ ಪ್ರಪಂಚದ ಯಾವುದೇ ದೇಶದಲ್ಲಿ ಕಾಣಲಾಗುವುದಿಲ್ಲ. ಗುರು ಪರಂಪರೆ ದೇಶದಲ್ಲಿ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಹೊರಹೊಮ್ಮಲು ಸಹಕಾರಿಯಾಗಲಿದೆ ಎಂದು ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಆರ್ಚಕ ಸಂತೋಷಭಟ್ ಪೂಜಾರ ಹೇಳಿದರು. ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ದೇವಸ್ಥಾನ ಆವರಣದಲ್ಲಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡುವ ಕೆಲಸ ಶಿಕ್ಷಕರಾಗಿದ್ದು. ಇಂದಿನ ಕಾಲದಲ್ಲಿ ಶಿಕ್ಷಕರು ವೃತ್ತಿಗೆ ಸೀಮಿತವಾಗಿರದೇ. ಮಕ್ಕಳಿಗೆ ಆದ್ಯಾತ್ಮಿಕ, ದೈಹಿಕ, ಶೈಕ್ಷಣಿಕ ಹಾಗೂ ಮನೋಸ್ಥೈರ್ಯವನ್ನು ತುಂಬುವ ಮೂಲಕ ದೇಶದ ಸದೃಡ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಒಂದು ದೇಶ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಕರ ಕಾರ್ಯ ಮಹತ್ವವಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕರ ಮಾರ್ಗದರ್ಶನವಿಲ್ಲದೆ ಅಭಿವೃದ್ದಿ ಹೊಂದುವುದು ಅಸಾಧ್ಯ. ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನಷ್ಟೆ ಮಾಡದೇ ಇಂತಹ ಕೋವಿಡ್-19 ಸಂಕಷ್ಟದ ಕಾಲದಲ್ಲಿಯೂ ಕೂಡ ಮುಂದೆ ಬಂದು ಸೇವೆಯನ್ನು ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಅಂತಹ ಗುರುಪರಂಪರೆ ಮಾರ್ಗವನ್ನು ನಾವೇಲ್ಲರೂ ಮುಂದುವರೆಸಿಕೊಂಡು ಹೋದಲ್ಲಿ ಮಾತ್ರ ಶಿಕ್ಷಣದ ಮೌಲ್ಯಗಳನ್ನು ಉಳಿಸಬಹುದಾಗಿದೆ ಎಂದರು. ಎಲ್ಲರ ಜೀವನದ ಪ್ರತಿಯೊಂದು ಹಂತದಲ್ಲಿ ಗುರು ಇರುತ್ತಾನೆ.
ತಂದೆ, ತಾಯಿ, ಅಣ್ಣ, ತಮ್ಮ, ಸ್ನೇಹಿತ ಈಗೇ ಹಲವಾರು ರೂಪದಲ್ಲಿ ಗುರುವಿನ ಸ್ಥಾನ ಇರುತ್ತದೆ. ಆದರೆ ಶಿಕ್ಷಕ ಮಾತ್ರ ಜೀವನದ ಸಾಮಾಜಿಕ ಜ್ಞಾನವನ್ನು ತುಂಬುತ್ತಾರೆ. ಅದಕ್ಕೆ ಎಲ್ಲರಗಿಂತ ವಿಶೇಷ ಸ್ಥಾನದಲ್ಲಿ ನಿಲ್ಲುವುದು. ಪ್ರತಿಯೊಬ್ಬ ಶಿಕ್ಷಕರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವ ಆದರ್ಶಗಳನ್ನು ರೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿಸ್ವಾಮಿ ಮಾತನಾಡಿ, ಯಾವುದೆ ಕೆಲಸ ಮಾಡುವ ಮುಂಚೆ ಮೊದಲು ಗುರುವಿನ ಕೃಪೆಯಾದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ. ಒಬ್ಬ ಶಿಲ್ಪಿ ಮೂರ್ತಿಯನ್ನು ಕೆತ್ತುವ ಮುಂಚೆ ಅವನಿಗೆ ಬೇಕಾದ ಯೋಗ್ಯವಾದ ಕಲ್ಲನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾನೆ. ಆದರೆ ಆ ಆಯ್ಕೆ ಶಿಕ್ಷಕರಿಗೆ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ದೃಷ್ಠಿಯಿಂದ ಕಂಡು ಅವರನ್ನು ಮೂರ್ತಿಯನ್ನಾಗಿ ಮಾಡುವ ಕಲೆಯಿರುವುದು ಶಿಕ್ಷಕನಿಗೆ ಮಾತ್ರ ಎಂದರು. ಈ ಸಮಯದಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ 15 ಶಿಕ್ಷಕರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಭಂಡಾರದ ಗುರುಗಳು ಮಲ್ಲಪ್ಪಯ್ಯ ಒಡೆಯರ, ನಿಂಗಪ್ಪ ಮುದ್ದಿ, ಹನುಮಂತಪ್ಪ ನಾಯರ, ಫಕ್ಕೀರಪ್ಪ ಐಗಳ, ದೇವಪ್ಪ ವಾಸರದ, ನ್ಯಾಯಾವಾದಿ ನಾಗರಾಜ ಸಂಶಿ, ನಿಂಗಪ್ಪ ದ್ಯಾವಣ್ಣವರ. ಪ್ರಕಾಶ ಬಳ್ಳಾರಿ. ರಾಜು ಮಾಲದಾರ, ಸಿದ್ದಪ್ಪ ಬಾತಿ, ಗಿರೀಶ ಪದಕಿ, ಕುಮಾರ ಬಾತಿ, ದಿಳ್ಳೆಪ್ಪ ಐಗಾಳ, ರುದ್ರಪ್ಪ ಜಜ್ಜರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.