ಪತ್ರಿಕಾ ವಿತರಕರ ದಿನಾಚರಣೆ ಆಚರಣೆ
- 15 Jan 2024 , 3:28 AM
- Haveri
- 127
<p>
<strong>ಶಿಗ್ಗಾವಿ: </strong>ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆ, ಮನೆಗೆ ಪತ್ರಿಕೆ ವಿತರಿಸುವಕಾರ್ಯಕ್ಕೆ ಯಾವುದೇ ಭಯವಿಲ್ಲದೆ ಜನರಿಗೆ ಪತ್ರಿಕೆ ತಲುಪಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಪತ್ರಿಕಾ ವಿತರಕರು ಮಾಡಿದ್ದಾರೆ ಅವರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿಸಿರುವದು ನೋವಿನ ಸಂಘತಿಯಾಗಿದೆ ಎಂದು ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ತಾಲೂಕು ಪತ್ರಿಕೆ ವಿತರಕರ ಸಂಘ ಆಯೋಜಿಸಿದ್ದ ಪತ್ರಿಕೆ ವಿತರಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪತ್ರಿಕಾರಂಗ, ಪ್ರಸ್ತುತ ಕಷ್ಟದಾಯಕ ದಿನಗಳಲ್ಲಿಯೂ ತನ್ನದೆ ಆದ ಮಹತ್ತರವಾದ ಕಾರ್ಯ ಮುಂದುವರಿಸಿದೆ. ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾದ ಪತ್ರಿಕೆ ಮತ್ತು ವಿತರಕರ ಸಮಸ್ಯೆಗಳಿಗೆ ಸ್ಪಂದಿಸಿ, ಆಡಳಿತರೂಢ ಸರ್ಕಾರ ಪರಿಹಾರ ಕಲ್ಪಿಸಬೇಕಿದೆ, ಕಾರ್ಮಿಕರಿಗೆ ಹಾಗೂ ಅನೇಕ ಸಮಾಜ ಸಂಘಟನೆಗಳಿಗೆ ಸರ್ಕಾರ ಸಹಾಯ ಧನ ನೀಡಿದ್ದು. ಪತ್ರಿಕಾ ವಿತರಕರು ಕೊರೊನಾ ಲಾಕ್ಡೌನ್ ಸಮಯದಲ್ಲಿ ಅನುಭವಿಸಿದ ಕಷ್ಟನಷ್ಟಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಸರ್ಕಾರ ಕೂಡಲೆ ಪತ್ರಿಕಾ ವಿತರಕರಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಪಿ.ಎಮ್. ಸತ್ಯಪ್ಪನವರ ಮಾತನಾಡಿ, ದೇಶದ ಸುದ್ದಿ ಸಮಾಚಾರವನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದ ಪತ್ರಿಕೆ ವಿತರಕರ ಜೀವನೋಪಾಯಕ್ಕೆ ಅಗತ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕೆಂದು ಮನವಿ ಮಾಡಿದರು. ಪತ್ರಕರ್ತರಾದ ಎಂ.ವ್ಹಿ.ಗಾಡದ, ಬಿ.ಎಸ್.ಹಿರೇಮಠ, ಬಸವರಾಜ ಹಡಪದ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ದಿನದ ಅಂಗವಾಗಿ ವಿತರಕರಿಂದ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಪತ್ರಕರ್ತರಾದ ಪರಮೇಶ ಲಮಾಣಿ, ರವಿ ಉಡುಪಿ, ಗೌಡಪ್ಪ ಬನ್ನೆ ಮಂಜುನಾಥ ಕಮ್ಮಾರ, ಜ್ಞಾನೋಬಾ ಮಾಳವದೆ, ವಿತರಕರ ಸಂಘದ ಉಪಾಧ್ಯಕ್ಷ ಸುಧೀರ ಮೆಳ್ಳಾಗಟ್ಟಿ, ಸುರೇಶ ಯಲಿಗಾರ, ಅರುಣ, ಸತೀಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸುರೇಶ ಯಲಿಗಾರ ಕಾರ್ಯಕ್ರಮ ನಿರ್ವಹಿಸಿದರು.
</p>