ಬಂಕಾಪುರ : ಪಟ್ಟಣದ ಬಸ್ ಸ್ಟ್ಯಾಂಡ ಹತ್ತಿರ ನೆಹರು ಗಾರ್ಡನ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಬಿ.ಜೆ.ಪಿ. ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಶ್ರೀ ಗಣೇಶ ಮೂರ್ತಿಗೆ ಪುಷ್ಫಗಳನ್ನು ಸಮರ್ಪಿಸುವ ಮೂಲಕ ಚಾಲನೆ ನೀಡಿದರು. ಶ್ರೀ ಗಣೇಶನ ಮೂರ್ತಿ ಮೆರವಣಿಗೆಗೆ ಟ್ಯಾಕ್ಟರ್ ನೀಡಲು ಯಾರು ಮುಂದೆ ಬರುತ್ತಿಲ್ಲ, ಆದ್ದರಿಂದ ಟ್ಯಾಕ್ಟರ್‍ರನ್ನು ಪೊಲೀಸ್ ಇಲಾಖೆಯೆ ಒದಗಿಸಬೇಕು ಎಂದು ಗಣೇಶ ಮಹಾ ಮಂಡಳಿಯವರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಪೊಲೀಸರು ಟ್ರಾಕ್ಟರ್ ವ್ಯವಸ್ಥೆ ಮಾಡಿದರು. ಇದರಿಂದ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾದ ವಿಸರ್ಜನಾ ಮೆರವಣಿಗೆ ಮದ್ಯಾಹ್ನ 1 ಗಂಟೆಗೆ ಆರಂಭವಾಯಿತು. ವಿಸರ್ಜನಾ ಮೆರವಣಿಗೆ ನೆಹರು ಗಾರ್ಡನ್‍ನಿಂದ ಆರಂಭಗೊಂಡು ಆಸಾರ ರಸ್ತೆ, ಸಿಂಪಿಗಲ್ಲಿ, ಮುಖ್ಯ ಮಾರುಕಟ್ಟೆ, ಹರಿಜನಕೇರಿ, ಕೊಟ್ಟಿಗೇರಿ ರಸ್ತೆಯ ಮೂಲಕ ಸಾಗಿತು ಮೆರವಣಿಗೆ ಸಾಗುವ ದಾರಿಯಲ್ಲಿ ಭಕ್ತರು ತಳಿರು, ತೋರಣ ಕಟ್ಟಿ ರಂಗೋಲಿ ಹಾಕಿ ಗಣೇಶ ಮೂರ್ತಿಯ ಮೇಲೆ ಹೂವಿನ ಪುಷ್ಪರ್ಚನೆ ಮಾಡುವ ಮೂಲಕ ವಿಘ್ನೇಶ್ವರನಿಗೆ ವಿದಾಯ ಹೇಳಿದರು. ಮೆರವಣಿಗೆ ತುಂಬೆಲ್ಲಾ ಕೇಸರಿ ದ್ವಜಗಳು ರಾಜಾಜೀಸುತ್ತಿದ್ದವು.
ಗಣೇಶ ಮಹಾ ಮಂಡಳಿಯವರು ಸಣ್ಣ ಪ್ರಮಾಣದ ವಾದ್ಯ ಮೇಳಕ್ಕಾದರೂ ಅನುಮತಿ ನೀಡುವಂತೆ ಪಟ್ಟು ಹಿಡಿದ ಹಿನ್ನಲೆಯಲ್ಲಿ ಪೊಲೀಸರು ಟ್ಯಾಕ್ಟರ್ ಮೇಲೆ ಕುಳಿತು ಸಣ್ಣ ಪ್ರಮಾಣದ ಜಾಂಜ್ ಬಾರಿಸಲು ಅವಕಾಶ ಕಲ್ಪಿಸಿಕೊಟ್ಟರು. ಕೋವಿಡ್-19 ಹಿನ್ನಲೆಯಲ್ಲಿ ಜನ ಸೇರದಂತೆ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿ ಜನರನ್ನು ತಡೆದರು. ಕಡ್ಡಾಯವಾಗಿ ಮಾಸ್ಕ ದರಿಸುವಂತೆ ಸೂಚಿಸಿದರು, ಮಾಸ್ಕ ದರಿಸದೇ ಬಂದವರಿಗೆ ಲಾಠಿ ರುಚಿ ತೋರಿಸಿ ಚದುರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಈ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಗಲಾಟೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಡಿಎಸ್‍ಪಿ, ಸಿಪಿಐ, ಪಿಎಸ್‍ಐ, ಎಎಸ್‍ಐ, ಡಿಆರ್ ತುಕಡಿಗಳು, ಹೋಮ್‍ಗಾಡ್ಸ್, ಪಿಸಿಗಳ ಬಿಗಿ ಬಂದೋಬಸ್ತ ಮಾಡಲಾಗಿತ್ತು. ಕೊನೆಗೆ ಗುಡ್ಡದಚನ್ನಾಪುರದ ಕೆರೆಯಲ್ಲಿ ವಿಸರ್ಜನೆಯಾಗುವಮೂಕ ಶ್ರೀ ವಿಘ್ನ ವಿನಾಶಕನ ಹಬ್ಬದಾಚರಣೆಗೆ ಸಮಾರೋಪ ಹಾಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಸದಸ್ಯರು, ಸ್ಥಳೀಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದರು.