ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ರೈತರ ಪ್ರತಿಭಟನೆ

  • 15 Jan 2024 , 6:47 AM
  • Haveri
  • 140

ರಾಣೆಬೆನ್ನೂರು : ತಾಲೂಕಿನ ನಿಟ್ಟೂರು ಗ್ರಾಮದಿಂದ ಕೋಣನತಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಸ್ತೆಯ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ರೈತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ತಾಲೂಕಿನ ಬಿಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರೋಗೊಪ್ಪ ಗ್ರಾಮದ ನಿಟ್ಟೂರ ರಸ್ತೆಯಿಂದ ಕೋಣನತಲೆ ಗ್ರಾಮಕ್ಕೆ ಸಂಚರಿಸುವ ರೈತರ ಸಂಪರ್ಕ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು ಈ ರಸ್ತೆಯು ನರೇಗಾ ಯೋಜನೆ ಅಡಿಯಲ್ಲಿ ಒಟ್ಟು 8.50 ಲಕ್ಷ ರೂಗಳಲ್ಲಿ ಕೆಲಸ ಆರಂಭವಾಗಿದೆ. ಆದರೆ ಗ್ರಾಮದ ಕೆಲವರು ತಕರಾರು ಮಾಡಿರುವ ಕಾರಣದಿಂದಾಗಿ ಈ ಸಂಪರ್ಕ ರಸ್ತೆ ಕಾಮಗಾರಿ ನಿಂತಿದೆ. ರೈತರ ಹೊಲಗಳಿಗೆ ಸಂಪರ್ಕ ಸಾಧಿಸುವ ಮುಖ್ಯ ರಸ್ತೆ ಇದಾಗಿದ್ದು. ಕಾಮಗಾರಿಯನ್ನು ತಡೆ ಹಿಡಿದ ಕಾರಣದಿಂದ ರೈತರು ಜಮೀನುಗಳಿಗೆ ಸಾಗಲು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ನರೇಗಾ ಯೋಜನೆಯಲ್ಲಿ ನಿರ್ಮಿಸಲಾಗುತ್ತಿದೆ. ಈ ಹಿಂದಿನಿಂದಲೂ ಸಾಗಿ ಬಂದಿರುವ ರಸ್ತೆ ಸಂಪರ್ಕ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಜಾರಿಯಾಗಿದೆ.

ಸರ್ಕಾರದ ಯೋಜನೆಗಳನ್ನು ಎಲ್ಲರೂ ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ತಾಲೂಕ ಆಡಳಿತ ಮಧಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ಹನುಮಂತಪ್ಪ ಚೌಡಣ್ಣನವರ, ರುದ್ರಪ್ಪ ಸಾವಜ್ಜಿ, ಭೀಮರಾಜ ಚೌಡಣ್ಣನವರ, ದುರಗಪ್ಪ ಮುಷ್ಠೂರ, ಶಿವಾನಂದ ಮಲ್ಲಾಡದ, ಮಂಜುನಾಥ ಚೌಡಣ್ಣನವರ, ಹನುಮಂತಪ್ಪ ಅಗಸಿಬಾಗಿಲ, ದುರಗಪ್ಪ ಮಲ್ಲಾಡದ, ಪರಮೇಶಪ್ಪ ಪೂಜಾರ, ಹನುಮಂತಪ್ಪ ಚೌಡಣ್ಣನವರ, ಸುರೇಶ, ನಾಗರಾಜ ಚೌಡಣ್ಣನವರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Read All News