ರಾಣೇಬೆನ್ನೂರ: ಆಹಾರ ಭದ್ರತೆಯು ಭಾರತ ದೇಶದ ಅತಿದೊಡ್ಡ ಗುರಿಯಾಗಿದೆ. ಪ್ರಪಂಚದಲ್ಲಿ ಎರಡನೇ ಅತಿದೊಡ್ಡ ಆಹಾರ ಧಾನ್ಯಗಳ ಉತ್ಪಾದನಾ ರಾಷ್ಟ್ರವಾಗಿದ್ದರೂ ಕೂಡ, ಅಪೌಷ್ಠಿಕತೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಶೇ.53.1ರಷ್ಟು ಹೆಂಗಸರಲ್ಲಿ ಅನೀಮಿಯಾದ ತೊಂದರೆಯಿದೆ ಎಂದು ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಹೆಚ್. ಎಮ್. ತಿಳಿಸಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಇಫ್ಕೋ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ಅಪೌಷ್ಠಿಕ ಕೊರತೆಯಿಂದಾಗಿ ನವಜಾತ ಶಿಶುಗಳ ತೂಕವು ಕಡಿಮೆಯಾಗುತ್ತಿದೆ. ಜೊತೆಗೆ ಆಹಾರದ ಕೊರತೆ ಮತ್ತು ಅಸಮತೋಲನವಾದ ಆಹಾರದಿಂದ 5 ವರ್ಷಕ್ಕಿಂತ ಚಿಕ್ಕ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಂಡು ದೇಹದ ತೂಕ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ, ಆಹಾರ ಭದ್ರತೆ ಕಾಯ್ದುಕೊಳ್ಳಲು ಪೌಷ್ಠಿಕ ಕೈತೋಟಗಳ ನಿರ್ಮಾಣ ಅಗತ್ಯವಾಗಿದೆ. ಪೌಷ್ಠಿಕ ಕೈತೋಟ ಎಂದರೆ ಮನೆಯ ಸುತ್ತಮುತ್ತಲಿನ ಚಿಕ್ಕ ಜಾಗದಲ್ಲಿ ಒಂದು ವ್ಯವಸ್ಥಿತವಾದ ವಿಧಾನದಲ್ಲಿ ತರಕಾರಿ, ಹಣ್ಣು ಮತ್ತು ಇತರೆ ದಿನನಿತ್ಯ ಅಗತ್ಯದ ಬೆಳೆಗಳನ್ನು ಬೆಳೆಯುವುದಾಗಿದೆ ಎಂದರು.
ಅಸಮತೋಲನ ಆಹಾರದ ಸೇವನೆಯಿಂದ ಆರೋಗ್ಯ ಕುಂಠಿತಗೊಳ್ಳುವುದಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಮಟ್ಟ ಕುಸಿಯುತ್ತದೆ. ಈ ಕಾರಣದಿಂದ ಬಯೋ-ಪೊರ್ಟಿ-ಪೈಡ್ ತಳಿಗಳನ್ನು (ಪೋಷಕಾಂಶಗಳಿಂದ ಬಲವರ್ಧನೆಗೊಳಿಸಿದ್ದು) ದೇಶದಲ್ಲಿ ಪೌಷ್ಠಿಕ ಭದ್ರತೆಯನ್ನುಗಳಿಸಲು ಅಭಿವೃದ್ಧಿಗೊಳಿಸಲಾಗಿದೆ. ಉದಾಹರಣೆಗೆ ಹೆಚ್ಚಿನ ಪ್ರಮಾಣದ ಬಿ-ಕರೋಟಿನ್ ಅಂಶ ಹೊಂದಿರುವ ಪೂಸ ಭೀಟ ಕೇಸರಿ-1 ಹೂ ಕೋಸು, ಭೂಸೋನಾ ಆಲೂಗಡ್ಡೆ ತಳಿಗಳಲ್ಲಿ ಉತ್ತಮ ಪ್ರಮಾಣದಲ್ಲಿವೆ. ಬಿ-ಕರೋಟಿನ್, ಭೂ ಕೃಷ್ಣ ಸಿಹಿ ಗೆಣಸುಗಳಲ್ಲಿ ಹೆಚ್ಚಿನ ಆಂತೊಸೈಯೂನಿನ್ ಅಂಶವಿದೆ. ದಾಳಿಂಬೆ ಸೊಲಾಪುರ್ ಲಾಲ್ ತಳಿ ಹೆಚ್ಚಿನ ಕಬ್ಬಿಣಾಂಶ ಹೊಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಆವರಣದ ಮುಖ್ಯಸ್ಥ ಡಾ. ಬಸವರಾಜಪ್ಪ ಆರ್ ಡೀನ್ ಮಾತನಾಡಿ, ಸಿರಿಧಾನ್ಯಗಳಾದ ನವಣೆ, ಕೊರಲೆ, ಹಾರಕ, ಸಾಮೆ, ಸಜ್ಜೆ, ರಾಗಿ ಮತ್ತು ಬರಗು ಅತೀ ಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್, ಲವಣಗಳು, ನಾರಿನಾಂಶ, ಸುಣ್ಣ ಮತ್ತು ಕಬ್ಬಿನಾಂಶಗಳನ್ನು ಹೊಂದಿವೆ. ಇವುಗಳ ಹೆಚ್ಚಿನ ಬಳಕೆಯಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಅವುಗಳನ್ನು ಬೆಳೆದು ಮಾರಾಟವನ್ನು ಮಾಡಿ ಉತ್ತಮ ಆದಾಯವನ್ನುಗಳಿಸಬಹುದು ಎಂದರು.
ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಜಯಶ್ರೀ ಮಾತನಾಡಿ, ಎಲ್ಲಾ ಅಂಗನವಾಡಿ ಕಾರ್ಯಕರ್ತರು ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕ್ರೀಯವಾಗಿ ಪಾಲ್ಗೊಳುವಂತೆ ಕರೆ ನೀಡಿದರು. ಕೇಂದ್ರದ ಸಹಾಯಕ ಪ್ರಾದ್ಯಾಪಕಿ ಡಾ.ಪ್ರೀಯಾ. ಪಿ ಮಾತನಾಡಿ, ಪೋಷಣ ಅಭಿಯಾನವು ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಬೇಕಾಗಿರುವ ಪೋಷಣೆಯ ಮಹತ್ವವನ್ನು ತಿಳಿಸಲು ನಡೆಸಲಾಗುತ್ತಿದೆ. ಗರ್ಭಿಣಿ ಮಹಿಳೆಯರಿಗೆ ಮಕ್ಕಳು ಸೇವಿಸಬೇಕಾದ ದಿನನಿತ್ಯದ ಊಟ ಮತ್ತು ಪಥ್ಯದ ಬಗ್ಗೆ ತಿಳಿಸಿದರು.ಇಫ್ಕೋ ಸೋಸೈಟಿ ನಾಗರಾಜ ಕರಿಗಾರ, ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಸೇರಿದಂತೆ ಅಂಗನವಾಡಿ ಹಾಗೂ ರೈತ ಮಹಿಳೆಯರು ಇದ್ದರು.