ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಮತಷ್ಟು ನೆರವು; ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ

  • 15 Jan 2024 , 2:22 AM
  • Haveri
  • 101

ಬ್ಯಾಡಗಿ: ಪಟ್ಟಣದ ಅಭಿವೃದ್ದಿಗೆ ಇನ್ನಷ್ಟು ಅನುದಾನ ತರುವ ಮೂಲಕ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ನೆರವು ಒದಗಿಸುವುದಾಗಿ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ತಿಳಿಸಿದ್ದಾರೆ. ಪಟ್ಟಣದ ಪುರಸಭೆ ಕಾರ್ಯಾಲಯ ಸಭಾಭವನದಲ್ಲಿ ಜರುಗಿದ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ ಪಟ್ಟಣದಲ್ಲಿ ಮುಖ್ಯವಾಗಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಬಾಕಿ ಉಳಿದಿದ್ದು, ಈ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ಮುನ್ನೆಡೆದಿವೆ. ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯೋನ್ಮುಖ ಆಗಿದ್ದು ಅವುಗಳನ್ನು ಪೂರ್ಣಗೊಳಿಸಬೇಕಿದೆ. ಸುಮಾರು 90ಕೋ.ರೂ.ವೆಚ್ಚದಲ್ಲಿ ಪಟ್ಟಣದಲ್ಲಿ ಒಳಚರಂಡಿ, 24X7 ಕುಡಿಯುವ ನೀರು ಪೂರೈಕೆ ಯೋಜನೆ, ಕಾಮಗಾರಿ ಪೂರ್ಣಗೊಂಡಿದ್ದು ಪ್ರಾಯೋಗಿಕವಾಗಿ ಕಾಮಗಾರಿ ಪರಿಶೀಲಿಸಿದ್ದೆನೆ. ಇನ್ನುಳಿದಂತೆ ಪುರಸಭೆ ಅಧಿಕಾರಿಗಳ ಕೆಲ ಬೇಡಿಕೆಗಳನ್ನು ಸಲ್ಲಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ. ಪುರಸಭೆ ಆಢಳಿತ ಮಂಡಳಿ ಅಧಿಕಾರ ಸ್ವೀಕರಿಸಿದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿದೆ.

ಈ ನಿಟ್ಟಿನಲ್ಲಿ ಎಲ್ಲ ಸದಸ್ಯರು ಹಾಗೂ ಪುರಸಭೆ ಅಧಿಕಾರಿಗಳು ಸಹಕಾರ ಮುಖ್ಯವಾಗಿದೆ ತಾಲೂಕಿನಾದ್ಯಂತ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ವಿವಿಧ ಹುದ್ದೆಗಳನ್ನು ಕಲ್ಪಿಸಿದ್ದು, ಎಪಿಎಂಸಿ, ಪುರಸಭೆ, ಕೆಡಿಪಿ ಸೇರಿದಂತೆ ವಿವಿಧ ಸರ್ಕಾರದ ನಾಮನಿರ್ಧೆಶನ ಸದಸ್ಯರುಗಳನ್ನು ಆಯ್ಕೆಗೊಳಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವೆ. ಪಕ್ಷದ ಸಣ್ಣಪುಟ್ಟ ಸಮಸ್ಯೆಗಳನ್ನು ಪಕ್ಷದ ಮಾಸಿಕ ಸಭೆಯಲ್ಲಿ ಚರ್ಚಿಸಬಹುದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂತನವಾಗಿ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಗಣೇಶ ಅಚಲಕರ, ಸಂಜೀವ ಮಡಿವಾಳರ, ಗಿರಿಜಾ ಪಟ್ಟಣಶೆಟ್ಟಿ, ಹನುಮಂತಪ್ಪ ಕೋಡಿಹಳ್ಳಿ, ಮಂಜಪ್ಪ ಬಣಕಾರ ಇವರುಗಳನ್ನು ಪುರಸಭೆ ಸರ್ವ ಸದಸ್ಯರು ಹಾಗೂ ಶಾಸಕರು ಸನ್ಮಾನಿಸಿದರು. ಈ ವೇಳೆ ಪುರಸಭೆ ಸದಸ್ಯ ಬಸವರಾಜ ಛತ್ರದ, ಚಂದ್ರಣ್ಣ ಶೆಟ್ಟರ, ರಾಮಣ್ಣ ಕೋಡಿಹಳ್ಳಿ, ಸರೋಜಾ ಉಳ್ಳಾಗಡ್ಡಿ, ಪಕ್ಕೀರಮ್ಮ ಚಲವಾದಿ, ವಿದ್ಯಾಶೆಟ್ಟಿ, ಸುರೇಶ ಉದ್ಯೋಗಣ್ಣನವರ, ಸುರೇಶ ಆಸಾದಿ, ಮುಖ್ಯಾಧಿಕಾರಿ ವಿ.ಎಂ.ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News