ರಾಣೇಬೆನ್ನೂರ: ಲಾಕ್‍ಡೌನ್ ಮತ್ತು ಅತಿವೃಷ್ಠಿಯಿಂದ ತೊಂದರೆಗೆ ಸಿಲುಕಿರುವ ತಾಲೂಕಿನ ರೈತರಿಗೆ 2019-20ನೇ ಸಾಲಿನ ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ತಹಸೀಲ್ದಾರ ಬಸವನಗೌಡ ಕೋಟೂರು ಮತ್ತು ಕೃಷಿ ಅಧಿಕಾರಿ ಶಿವಾನಂದ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಲಾಕ್‍ಡೌನ್ ಮತ್ತು ಅತೀವೃಷ್ಠಿಯಿಂದಾಗಿ ತಾಲೂಕಿನ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಇದುವರೆಗೂ 2019-20ನೇ ಸಾಲಿನ ಬೆಳೆ ವಿಮೆ ಹಣ ಬಿಡುಗಡೆಯಾಗಿಲ್ಲ. ಇದರಿಂದ ಲಾಕ್‍ಡೌನ್‍ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಶ್ವಾಸ ಕಳೆದುಕೊಂಡಿರುವ ಇನ್ಸೂರೆನ್ಸ್ ಕಂಪನಿಗಳು ತಮಗೆ ಎಲ್ಲಿ ಮಕ್ಮಲ್ ಟೊಪಿ ಹಾಕುತ್ತವೇಯೋ ಎಂಬ ಅನುಮಾನ ರೈತರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಗಮನಹರಿಸಿ ಬೆಳೆ ವಿಮೆ ತುಂಬಿದ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುವಂತೆ ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಳೇ ಪಿ.ಬಿ.ರಸ್ತೆ ಬಂದ್ ಮಾಡಿ ತಹಸೀಲ್ದಾರ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿ.ಕೆ.ರಾಜನಹಳ್ಳಿ, ಎನ್.ಬಿ.ರಾಮಾಳದ, ಸುರೇಶಪ್ಪ ಗರಡಿಮನಿ, ಡಿಳ್ಳೆಪ್ಪ ಸತ್ಯಪ್ಪನವರ, ಗಜೇಂದ್ರ ಕರಿಯಜ್ಜೇರ, ಗದಿಗೆಪ್ಪ ನೇಕಾರ, ಪಿ.ಎನ್.ಅರಳಿಕಟ್ಟಿ, ಬಿ.ಸಿ.ಯಲ್ಲಕ್ಕನವರ ಬಸಟೆಪ್ಪ ಸಪ್ಪಾಳಿ, ಬಿ.ಎಚ್.ಹಾದಿಮನಿ, ಸುರೇಶ ಅರಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.