ಬೆಳಗಾವಿ : ಸರ್ಕಾರ ರೈತ, ನೇಕಾರ ವಿರೋಧಿ ನೀತಿ ಅನುಸರಿಸುತ್ತಾ ಕಾಯ್ದೆ ತಿದ್ದುಪಡಿ ಮೂಲಕ ರೈತರಿಗೆ ತೀವ್ರ ತೊಂದರೆ ತಂದೊಡ್ಡಿದೆ ಎಂದು ಆರೋಪಿಸಿ ಭಾರತೀಯ ಕೃಷಿಕ ಸಮಾಜ ಹಾಗೂ ವಿವಿಧ ರೈತ ಸಂಘಟನೆಗಳ ನೂರಾರು ರೈತರು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಕೃಷಿಕ ಸಮಾಜ ಮತ್ತು ರೈತ ಸಂಘಟನೆಗಳ ನೂರಾರು ರೈತರು, ಸರ್ಕಾರ ಜನವಿರೋಧಿ ನೀತಿಗಳನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು. ಪ್ರಕೃತಿ ವಿಕೋಪ, ಕೋವಿಡ್ ಸಂಕಷ್ಟದಿಂದ ತತ್ತರಿಸಿರುವ ರೈತರು, ನೇಕಾರರು, ಕೂಲಿ ಕಾರ್ಮಿಕರು, ರಾಜ್ಯ ಸರ್ಕಾರದ ರೈತ ವಿರೋಧಿ, ನೇಕಾರ ವಿರೋಧಿ ನೀತಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಜನವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು. ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜದ ಮುಖಂಡ ಸಿದಗೌಡ ಮೋದಗಿ ಮಾತನಾಡಿ, ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಕಳಪೆ ಬೀಜ ಪೂರೈಕೆಯಿಂದ ರೈತರ ಬೆಳೆಗಳು ನಾಶವಾಗಿದ್ದರೂ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಸರ್ಕಾರ ಕೂಡಲೇ ರೈತ, ನೇಕಾರ, ಪ್ರಜಾ ವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.