ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ವಿಭಾಗ ಉದ್ಘಾಟಿಸಿದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ

  • 6 Jan 2024 , 7:26 AM
  • Haveri
  • 115

ಬ್ಯಾಡಗಿ : ಕೊರೋನಾ ರೋಗಕ್ಕೆ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದೆ, ಸಾರ್ವಜನಿಕರು ರೋಗ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಚಿಕಿತ್ಸೆ ಪಡೆದಲ್ಲಿ ಆರೋಗ್ಯ ತೊಂದರೆ ತಪ್ಪಿಸಲು ಸಾದ್ಯವೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಕೋವಿಡ್-19 ಆಸ್ಪತ್ರೆ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿಯೂ ಕೊರೋನಾ ರೋಗ ಆವರಿಸಿದೆ. ಕೆಮ್ಮು, ನೆಗಡಿ, ಜ್ವರದಿಂದ ಬಳಲುವವರು ಹಿಂಜರಿಕೆ ಮಾಡದೆ, ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ 70 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇನ್ಮುಂದೆ ತಾಲೂಕಿನ ಪೋಸಿಟಿವ್ ವ್ಯಕ್ತಿಗಳನ್ನು ಬೇರೆಡೆಗೆ ಕಳುಹಿಸದೆ, ಸ್ಥಳೀಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸಲು ವೈದ್ಯ ಸಿಬ್ಬಂದಿಗಳು ಇನ್ನಷ್ಟು ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಟ್ಟರಾಜ ಮಾತನಾಡಿ, ತಾಲೂಕಿನಲ್ಲಿ ಈವರೆಗೂ ಒಟ್ಟು 650 ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ 500 ಜನರು ಗುಣಮುಖರಾಗಿದ್ದಾರೆ. ಇನ್ನುಳಿದ 150 ಜನರು ಸಕ್ರೀಯರಾಗಿದ್ದಾರೆ. ಸಾರ್ವಜನಿಕರು ರೋಗದ ಕುರಿತು ಭಯಪಡದೆ, ಮುಂಜಾಗೃತೆ ವಹಿಸಿ, ತಮಗೆ ತೊಂದರೆಯಿದ್ದಲ್ಲಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ, ತಾಲೂಕು ವೈದ್ಯಾಧಿಕಾರಿ ಸುಹೀಲ್ ಹರವಿ, ವಾಯ್.ಹಿರಿಯಕ್ಕನವರ, ಸದಾನಂದ ಚಿಕ್ಕಮಠ, ಮಹೇಶ ಭಜಂತ್ರಿ, ಡಾ.ವೀರೇಶ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಶೆಟ್ಟರ, ಪಿಕಾರ್ಡ ನಿರ್ಧೇಶಕ ಸುರೇಶ ಯತ್ನಳ್ಳಿ, ಹೊನ್ನೂರಪ್ಪ ಕಾಡಸಾಲಿ, ಸುರೇಶ ಉದ್ಯೋಗಣ್ಣನವರ, ಜೀತೇಂದ್ರ ಸುಣಗಾರ, ಸಂಜೀವ ಮಡಿವಾಳರ, ಶಿವಯೋಗಿ ಗಡಾದ ಮತ್ತಿತರರು ಉಸ್ಥಿತರಿದ್ದರು.

Read All News