ಪುರಾತನನಗರೇಶ್ವರದೇವಸ್ಥಾನದಲ್ಲಿಶಿವಲಿಂಗಮತ್ತುನಂದಿಯಶಿಲಾಮೂರ್ತಿಯನ್ನುಸ್ಥಾಪನೆಗೆಸ್ಥಳಿಯರಆಗ್ರಹ
ಬಂಕಾಪುರ: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನ ದೇವರಿಲ್ಲದ ಗುಡಿಯಂತಾಗಿದೆ. ಕ್ರಿ.ಶ.11 ನೇ ಶತಮಾನದಲ್ಲಿ ಸಾರ್ವಜನಿಕರ ನೆರವಿನಿಂದ ನಿರ್ಮಾಣವಾದ ಈ ದೇವಸ್ಥಾನದಲ್ಲಿ ಇಂದು ದೇವರ ಮೂರ್ತಿಯಿಲ್ಲದೆ ಕಳಾಹೀನವಾಗಿರುವದು ದುರ್ದೈವದ ಸಂಗತಿಯಾಗಿದೆ. ರಾಷ್ಟ್ರಕೂಟರು, ಕದಂಬರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ಬಿಜಾಪುರ ಆದಿಲಶಾಹಿಗಳು ಆಳಿದ ಬಂಕಾಪುರ ಪಟ್ಟಣ ಇಂದು ತನ್ನೇಲ್ಲಾ ವೈಭವವನ್ನು ಕಳೆದುಕೊಳ್ಳುವಂತಾಗಿದೆ. 139 ಎಕರೆ ವಿಶಾಲವಾದ ಸ್ಥಲದುರ್ಗ ಮಾದರಿ ಕೋಟೆ ಆವರಣದಲ್ಲಿ ಶ್ರೀ ನಗರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನ ಪರಿಪೂರ್ಣ ಶಿಲೆಯಿಂದ ನಿರ್ಮಾಣವಾಗಿದೆ. ಗರ್ಭಗುಡಿ, ಮುಖಮಂಟಪ, ವಿಶಾಲವಾದ ಸಭಾಗೃಹಗಳೆಲ್ಲವೂ ಶಿಲೆಗಳಿಂದ ನಿರ್ಮಾಣಗೊಂಡಿದೆ.
ಜಕಣಾಚಾರಿಯ ಈ ಕಲಾ ಕುಸರಿ ನೋಡುಗರ ಕಣ್ಮನ ಸೆಳೆಯುತ್ತಿವೆ. ಕ್ರಿ.ಶ. 11ನೇ ಶತಮಾನದಿಂದ 13ನೇ ಶತಮಾನದವರೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮೆರೆದ ಈ ದೇವಾಲಯವು ಆಚಾರಚಂದ್ರ ಭೂಷಣ ದೇವರು, ವಿಮುಳಶಕ್ತಿ ದೇವರುಗಳ ಪೂಜಾ ಪುನಸ್ಕಾರಗಳು ಪ್ರತಿದಿನ ಅವ್ಯಾಹಿತವಾಗಿ ನಡೆಯುತ್ತಿದ್ದವು. ಕದಂಬ ಕೀರ್ತನ ಕಾಲದಲ್ಲಿ ನಗರೇಶ್ವರ ದೇವಸ್ಥಾನವು ಬರಿ ಧಾರ್ಮಿಕ ಕೇಂದ್ರವಾಗಿರದೆ ವಿದ್ಯಾ ಕೇಂದ್ರವಾಗಿ ಅನಾಥರಕ್ಷಕರ ಕೇಂದ್ರವಾಗಿ, ತಫೋಧನರ ಆಹಾರ ಕೇಂದ್ರವಾಗಿ ಪರಸ್ಥಳದ ತಪಸ್ವಿಗಳ, ಜ್ಞಾನ ಪಿಪಾಸುಗಳ, ಆಧ್ಯಾತ್ಮ ಚಿಂತಕರ ನೆಲೆಬೀಡಾಗಿತ್ತು. ವೇದ ವ್ಯಾಕರಣ ಪುರಾಣ ದರ್ಶನಾದಿಗಳ ವಿದ್ಯಾಸ್ಥಾನವಾಗಿ ದೀನ, ಅನಾಥ, ಅಂಧ ರೋಗಿಗಳಿಗೆ ವೈದ್ಯ ಶಾಲೆಯಾಗಿ ಸಕಲ ಪ್ರಾಣಿ, ಪಕ್ಷಿಗಳಿಗೆ ಅಭಯ ಸ್ಥಾನವಾಗಿ ಈ ದೇವಸ್ಥಾನ ಬೆಳೆದು ಬಂದಿದೆ. ವೈಭವಪೂರಿತ ರಾಜ ಮಹರಾಜರು ಆಡಳಿತ ಮಾಡಿದ ಈ ನಗರೇಶ್ವರ ದೇವಸ್ಥಾನ ಇಂದು ದೇವರಿಲ್ಲದ ಗುಡಿಯಂತಾಗಿದೆ.
ಕೇಂದ್ರ ಮಾನವ ಸಪನ್ಮೂಲ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯಡಿಯಲ್ಲಿ ಈ ದೇವಸ್ಥಾನವಿದ್ದು ಮೂರ್ತಿ ಪ್ರತಿಷ್ಠಾಪನೆಗಾಗಿ ಇಲ್ಲಿನ ಸಾರ್ವಜನಿಕರು 1996 ರಿಂದಲೂ ಈ ಬಾಗದ ಶಾಸಕರೂ, ರಾಜ್ಯದ ಗೃಹ ಸಚಿವರೂ ಆದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಯವರಿಂದ ಹಿಡಿದು ಮಂತ್ರಿ ಮಹೋದಯರಿಗೆ ಮನವಿ ಅರ್ಪಿಸುತ್ತಾ ಬಂದರೂ ಕೂಡಾ ಇದುವರೆಗೂ ಯಾವುದೇ ಪ್ರಯೋಜನ ವಾಗದೇ ಇರುವುದು ವಿಷಾದನಿಯ ಸಂಗತಿಯಾಗಿದೆ. ಪಟ್ಟಣದ ಸಾರ್ವಜನಿಕರ ಬಹುವರ್ಷಗಳ ಬೇಡಿಕೆಯಾದ ನಗರೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಮತ್ತು ನಂದಿಯ ಶಿಲಾಮೂರ್ತಿಯನ್ನು ಸ್ಥಾಪಿಸಲು ಸ್ಥಳೀಯ ಶಾಸಕರು, ಸಂಸದರು, ಜನಪ್ರತಿನಿದಿಗಳು ಪ್ರಯತ್ನಿಸಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರೇಶ್ವರ ದೇವಸ್ಥಾನದಲ್ಲಿ ಗತಕಾಲದ ಪೂಜಾ ವೈಭವ ಮರುಕಳಿಸಬೇಕೇನ್ನುವುದೇ ಪಟ್ಟಣದ ಸಾರ್ವಜನಿಕರ ಮಹದಾಶೆಯಾಗಿದೆ.