ಶಿಗ್ಗಾವಿ: ತಾಲೂಕಿನ ಅತ್ತಿಗೇರಿ ಗ್ರಾಮದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿದಾಗ ಚಿಕಿತ್ಸೆಗಾಗಿ ಅಂಬುಲೆನ್ಸ ವಾಹನದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅರೆವೈದ್ಯಕೀಯ ತಜ್ಞ ಧರ್ಮೇಂದ್ರ ಮರಕುಂಬಿ ಅವರು ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಿ, ಅವಳಿ ಮಕ್ಕಳು ಜನಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅತ್ತಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದಿನಾಂಕ 26 ಮಧ್ಯರಾತ್ರಿ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುವಾಗ ಗರ್ಭಿಣಿಗೆ ತುಂಬಾ ನೋವು ಕಾಣಿಸಿಕೊಂಡಾಗ, ಅರೆವೈದ್ಯಕೀಯ ತಜ್ಞ ಧರ್ಮೇಂದ್ರ ಮರಕುಂಬಿ ಸಮಯಪ್ರಜ್ಞೆಯಿಂದ ವಾಹನ ಚಾಲಕ ಗುರುಬಸವನಗೌಡ ಪಾಟೀಲ ಅವರ ಸಹಾಯ ಪಡೆದು ಹೆರಿಗೆ ಮಾಡಿಸಲು ಮುಂದಾದರು ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಗರ್ಭಿಣಿ ಮತ್ತು ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದ್ದಾರೆ. ಅಂಬುಲೆನ್ಸ ವಾಹನದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳ ಯಶಸ್ವಿ ಹೆರಿಗೆ ಮಾಡಿಸಿದ ಕಾರ್ಯಕ್ಕೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ|| ಹನುಮಂತಪ್ಪ ಪಿ. ಎಚ್. ತಾಲೂಕು ವೈದ್ಯಾಧಿಕಾರಿ ಡಾ|| ಹನಮಂತಪ್ಪ ಕುಡಚಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.