ಮೈಸೂರು: ಟೊಮೆಟೊ ಒಳಗೆ ಗಾಂಜಾ ಸಾಗಿಸುತ್ತಿದ್ದ ತರಕಾರಿ ವಾಹನವನ್ನು ಮೈಸೂರು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದಿಂದ ಕರ್ನಾಟಕ ಮೂಲಕ ಕೇರಳ ರಾಜ್ಯಕ್ಕೆ ತರಕಾರಿ ಸಾಗಿಸುವ ವಾಹನದಲ್ಲಿ ಟೊಮೆಟೊ ಕ್ರೇಟ್ ಒಳಗೆ ಗಾಂಜಾ ಸಾಗಿಸುತ್ತಿದ್ದಾಗ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿರುವ ಏರ್‌ಪೋರ್ಟ್ ಬಳಿ ನಾಲ್ವರು ಆರೋಪಿಗಳನ್ನು ಖಚಿತ ಮಾಹಿತಿ ಆದರದ ಮೇರೆಗೆ ಪೋಲಿಸರ ಬಲೆ ಬೀಸಿದ್ದಾರೆ.
ಬಂಧಿತರಿಂದ 86 ಕೆ.ಜಿ 300 ಗ್ರಾಂ ಗಾಂಜಾ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಹಮ್ಮದ್ ಶಾಫಿ, ಸಲೀಂ, ಪಫಿ, ಇಬ್ರಾಹಿಂ ಕುಟ್ಟಿ ಎಂಬುವವರು ಕೇರಳ ಮೂಲದರೆಂದು ತಿಳಿದುಬಂದಿದೆ. ಈ ಪ್ರಕರಣ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಕೋಲಾರ ಜಿಲ್ಲೆ ಕೆಜಿಎಫ್ ನಗರದ ಕೃಷ್ಣಗಿರಿ ಲೈನ್ ನ ಮನೆಯೊಂದರಲ್ಲಿ 190 ಕೆ.ಜಿ ತೂಕದ ಗಾಂಜಾ ಪತ್ತೆ ಮಾಡಲಾಗಿತ್ತು. ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸರ ಕಾರ್ಯಾಚರಣೆಯ ವೇಳೆ ಬಲೆಗೆ ಬಿದ್ದಿದ್ದರು.