ಯುಜಿಡಿ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ

  • 14 Jan 2024 , 11:15 PM
  • Haveri
  • 223

ಬ್ಯಾಡಗಿ: ಪಟ್ಟಣದ 23 ವಾರ್ಡಗಳು ಹಾಗೂ ಹೊಸಬಡಾವಣೆ ಸೇರಿದಂತೆ ಒಳಚರಂಡಿ ಕಾಮಗಾರಿಗೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದಿಂದ 65.47 ಕೋಟಿ ರೂ. ಗಳಲ್ಲಿ 24*7 ಕುಡಿಯುವ ನೀರು ಪೂರೈಕೆ ಯೋಜನೆಗೆ 44.57 ಕೋಟಿ ರೂ. ಮಂಜೂರಾಗಿದ್ದು ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಕಳಪೆ ಮಾಡಿದಲ್ಲಿ ಸಹಿಸುವುದಿಲ್ಲವೆಂದು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಇಂಜಿನೀಯರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಇಲ್ಲಿನ ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ನಿರ್ಮಿಸಿದ ನೀರು ಸಂಗ್ರಹ ಜಲಾಗಾರ ಹಾಗೂ ಯುಜಿಡಿ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಹೆಚ್ಚುವರಿಯಾಗಿ ರಾಣೇಬೆನ್ನೂರಿನಿಂದ ಬ್ಯಾಡಗಿ ಪೈಪಲೈನ್ ನವೀಕರಣಕ್ಕೆ 8 ಕೋಟಿ ರೂ, ಮನೆಮನೆಗಳಿಗೆ ನೀರಿನ ಪೈಪ, ಚೆಂಬರ್ ಅಳವಡಿಸಲು 2.5 ಕೋಟಿ ರೂ. ಅನುದಾನ ಮಂಜೂರಾಗಿದೆ. ಇಂಜಿನೀಯರುಗಳು ನಿರ್ಲಕ್ಷ್ಯ ಮಾಡದೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಚೆಂಬರ್ ಹಾಗೂ ಪೈಪಲೈನಗಾಗಿ ಅಲ್ಲಲ್ಲಿ ರಸ್ತೆ ಕೀಳಲಾಗಿದ್ದು, ಕೂಡಲೇ ಎಲ್ಲ ರಸ್ತೆಗಳ ದುರಸ್ಥಿಗೊಳಿಸುವಂತೆ ಸೂಚಿಸಿದರು.

ನಂತರ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ಎಲ್ಲ ವಾರ್ಡಗಳಲ್ಲಿ ಯುಜಿಡಿ ಪೈಪಲೈನ್ ಹಾಗೂ ಚೆಂಬರ್ ನಿರ್ಮಿಸಿದೆ. ಗಾಂದಿನಗರ, ವಿದ್ಯಾನಗರ, ಬಸವೇಶ್ವರ ನಗರ, ನೆಹರು ನಗರಗಳಲ್ಲಿ ಪ್ರಾಯೋಗಿಕವಾಗಿ ಸಂಪರ್ಕ ನೀಡಲಾಗುತ್ತಿದೆ. ಒಳಚರಂಡಿ ನೀರು ಸಂಗ್ರಹಿಸಿ, ಶುದ್ದೀಕರಿಸಿ ಹೊರಬಿಡುವ ವ್ಯವಸ್ಥೆಯನ್ನು ಮಲ್ಲೂರು ರಸ್ತೆಯ ಬಳಿಯ ಪುರಸಭೆ ಜಾಗದಲ್ಲಿ ಮಾಡಲಾಗಿದೆ. ಪ್ರತಿದಿನವೂ ಮನೆಮನೆಗೆ ಕಸ ಸಂಗ್ರಹಿಸುವ ಯೋಜನೆ ಜಾರಿಯಿದ್ದು, ಸಾರ್ವಜನಿಕರು ಪಟ್ಟಣದ ಸ್ವಚ್ಚತೆಗೆ ಸಹಕಾರ ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಧಿಕಾರಿ ನವೀನಕುಮಾರ ಎಚ್.ವಿ, ಇಂಜಿನೀಯರ್ ಎಂ. ಉಮೇಶ, ಮಹಾಂತೇಶ ಹಳ್ಳಿ, ಎ.ವೀರಾಚಾರ್ಯ, ಸುರೇಶ ಆಸಾದಿ ಹಾಗೂ ಇತರರು ಉಪಸ್ಥಿತರಿದ್ದರು.

Read All News