ಮೈಸೂರು: ವಿಶ್ವವಿಖ್ಯಾತ ದಸರಾವನ್ನು ಹಬ್ಬವನ್ನು ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಿಂದ ಈ ಬಾರಿಯ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಲಾಗಿದೆ. ಪ್ರತಿವರ್ಷದಂತೆ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುವುದಿಲ್ಲ ಈ ಬಾರಿಯ ದಸರಾ ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಿರುತ್ತೆ.ಪ್ರತೀ ವರ್ಷದಂತೆ ಅರಮನೆಯಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ಇರುತ್ತವೆ.

ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಅರಣ್ಯ ಇಲಾಖೆ ಕ್ವಾರಂಟೈನ್ ನಲ್ಲಿರಿಸಲು ತೀರ್ಮಾನಿಸಿದೆ. ಆದ್ದರಿಂದ ಆನೆಗಳ ತೂಕ ಮಾಡಿಸಲೂ ಹೊರಗೆ ಕರೆದೊಯ್ಯಲಾಗುತ್ತಿಲ್ಲ.
ಈಗಾಗಲೇ ಅರಣ್ಯ ಇಲಾಖೆ ಕೆಲವು ಕಾರ್ಯವಿಧಾನಗಳನ್ನು ಕೈಬಿಟ್ಟಿದ್ದು, ಆನೆಗಳು, ಮಾವುತರು ಹಾಗೂ ಕಾವಾಡಿಗಳೂ ಕೂಡ ಹೊರಗಡೆ ಎಲ್ಲೂ ತೆರಳದಂತೆ ಕಟ್ಟುನಿಟ್ಟಿನ ನಿಯಗಳನ್ನು ಜಾರಿ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಜೆ.ಅಲೆಕ್ಸಾಂಡರ್ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ ಕಾರ್ಯನಿರ್ವಹಿಸುತ್ತಿದ್ದು, ಆನೆಗಳು ಹುಣಸೂರಿನ ವೀರನಹೊಸಳ್ಳಿಯಿಂದ ಹೊರಡುವಾಗ ತೂಕ ಮಾಡಿಸಲಾಗಿದೆ. ಈ ನಡುವೆ ದಸರಾ ಗಜಪಡೆಯೊಂದಿಗೆ ಮೈಸೂರು ಅರಮನೆಗೆ ಆಗಮಿಸಿರುವ ಮಾವುತರು, ಕಾವಾಡಿಗಳು, ಸಹಾಯಕರು ಹಾಗೂ ಆನೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಸಿಬ್ಬಂದಿ ಸೇರಿದಂತೆ 19 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ಎಲ್ಲರ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.

ಜಂಬೂ ಸವಾರಿ ಮುನ್ನ 21 ಸುತ್ತು ಕುಶಾಲತೋಪು ಸಿಡಿಸುವ ಡ್ರೈ ತಾಲೀಮನ್ನು ಅರಮನೆಯ ಅಂಗಳದಲ್ಲಿ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ನಡೆಸಲಾಗುತ್ತಿದ್ದು ಜೊತೆಗೆ ಸಿಎಆರ್ ನ 30 ಸಿಬ್ಬಂದಿಗಳು ಡ್ರೈ ಪ್ರಾಕ್ಟೀಸ್ ನಲ್ಲಿ ಭಾಗಿಯಾಗಿದ್ದರು. ದಸರಾ ವೇಳೆ ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳನ್ನು ಬಳಸಲಾಗುತ್ತದೆ. ಆನೆಗಳು, ಕುದುರೆಗಳು ಬೆದರದಂತೆ ನೋಡಿಕೊಳ್ಳುವುದು ತಾಲೀಮಿನ ಉದ್ದೇಶವಾಗಿದೆ. ಪ್ರತಿ ವರ್ಷ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ತಾಲೀಮು ನಡೆಸಲಾಗುತ್ತಿತ್ತು.
ಆದರೆ ಈ ಬಾರಿ ಆನೆಗಳನ್ನು ಹೊರಗಡೆ ಕರೆದುಕೊಂಡು ಹೋಗುವಂತಿಲ್ಲ. ಹೀಗಾಗಿ ಅರಮನೆಯ ಸಮೀಪವೇ ತಾಲೀಮು ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಲಿರುವ ಕಾರಣ ಈ ಬಾರಿ ಜನರು ದಸರಾ ಮಹೋತ್ಸವ ಸಂಭ್ರಮದಿಂದ ವಂಚಿತರಾಗಲಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದಸರಾ ಮಹೋತ್ಸವ ನಡೆಯಲಿದ್ದು, 2000 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.