ಬ್ಯಾಡಗಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಡಿ.ಕೆ.ಶಿವಕುಮಾರ ಮನೆ ಮೇಲೆ ಸಿಬಿಐ ದಾಳಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಇಂದು ಕಾಂಗ್ರೇಸ್ ಕಾರ್ಯಕರ್ತರು ಪಟ್ಟಣದ ಹಳೆಪುರಸಭೆ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ತಾಲೂಕಾ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಸಭೆ ಮತಕ್ಷೇತ್ರದ ಕಾರ್ಯಕರ್ತರ ಸಭೆ ಜರುಗಿಸಿದ ನಂತರ ಹಳೆಪುರಸಭೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಕೊರೋನಾ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ದಿಯನ್ನು ಕುಂಠಿತಗೊಳಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದು, ರಾಜ್ಯವ್ಯಾಪಿ ರೈತರು ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದರೂ, ಸರ್ಕಾರ ತನ್ನ ದೋರಣೆಯನ್ನು ಬದಲಿಸಿಲ್ಲ. ಹೀಗಾಗಿ ಜನವಿರೋಧಿ ಸರ್ಕಾರ ಕಿತ್ತೊಗೆಯುವ ದಿನಗಳು ದೂರವಿಲ್ಲ. ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲವೆಂದರು. ಆರೇಳು ತಿಂಗಳಿಂದ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದು, ಸರ್ಕಾರ ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ, ರೈತ ವಿರೋಧಿ ಕಾಯ್ದೆ ಮೂಲಕ ರೈತರ ಹಿತ ಕಡೆಗಣಿಸಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಜೈವಿಕ ಇಂಧನ ಮಂಡಳಿ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಈಗ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆದಿದ್ದು, ಆರ್.ಎಂ.ಕುಬೇರಪ್ಪ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಹಿಂದಿನ ಅವಧಿಯ ಸದಸ್ಯರ ಕಾರ್ಯವನ್ನು ಮತದಾರರು ಅವಲೋಕಿಸಿದ್ದಾರೆ, ಹೊಸ ಅಭ್ಯರ್ಥಿಯನ್ನು ಗೆಲ್ಲಿಸಲು ಮತದಾರರು ತೀರ್ಮಾನಿಸಿದ್ದಾರೆ. ಜನರಲ್ಲಿ ಕಾಂಗ್ರೇಸ ಪಕ್ಷದ ತತ್ವಸಿದ್ದಾಂತಗಳನ್ನು ನಂಬಿದ್ದಾರೆ. ಗ್ರಾಮೀಣ ಮಟ್ಟದಿಂದ ಪಕ್ಷವನ್ನು ಬಲಪಡಿಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಪದವೀಧರ ಅಭ್ಯರ್ಥಿ ಆರ್.ಎಂ. ಕುಬೇರಪ್ಪ ಮಾತನಾಡಿ, ಅಖಂಡ ಧಾರವಾಡ ಜಿಲ್ಲೆಯಲ್ಲಿ ಈ ಹಿಂದೆ ಧಾರವಾಡ, ಗದಗ ಜಿಲ್ಲೆಗಳ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 24 ಸಾವಿರ ಮತದಾರರನ್ನು ಹೊಂದಿದ್ದು, ಸ್ಥಳೀಯರ ಅಭ್ಯರ್ಥಿಯ ಆಯ್ಕೆ ಖಚಿತವಾಗಿದೆ. ಐದು ವರ್ಷಗಳ ಕಾಲ ಪದವೀಧರರ ಸಮಸ್ಯೆ ಕುರಿತು ಧ್ವನಿ ಎತ್ತಿರುವೆ. ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ನನಗೂ ಒಮ್ಮೆ ಅವಕಾಶ ನೀಡಲು ಮತದಾರರು ಕೈಹಿಡಿಯಲಿದ್ದಾರೆ ಎಂದು ಹೇಳಿದರು. ಈ ಸಂದರ್ಭಲ್ಲಿ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಜಿ.ಪಂ.ಸದಸ್ಯ ಅಬ್ದುಲ್‍ಮುನಾಫ್ ಎಲಿಗಾರ, ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಆರ್.ಎಂ.ಕುಬೇರಪ್ಪ, ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ತಾಲೂಕು ಕಾಂಗ್ರೆಸ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಹನುಮಂತಪ್ಪ ಲಮಾಣಿ, ಶಂಕರಗೌಡ್ರ ಪಾಟೀಲ, ರುದ್ರಪ್ಪ ಹೊಂಕಣದ, ಮಾರುತಿ ಅಚ್ಚೀಗೇರಿ, ಪ್ರಕಾಶ ಬನ್ನಿಹಟ್ಟಿ, ದುರ್ಗೇಶ ಗೋಣೆಮ್ಮನವರ, ಮಂಜುನಾಥ ಬೋವಿ, ಜಗದೀಶ, ಮಾಲತೇಶ ಕೆಂಪಗೌಡ್ರ, ಜಗದೀಶ ಪೂಜಾರ, ಕೆ.ಎಸ.ನಾಯ್ಕರ, ಬಸವರಾಜ ಸವಣೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.