ಬ್ಯಾಡಗಿ: ಪಟ್ಟಣದಲ್ಲಿಂದು ಗಾಂಧಿ ಜಯಂತಿ ಪ್ರಯುಕ್ತ ಪುರಸಭೆ ಕಾರ್ಯಾಲಯ ಹಾಗೂ ಮುಖ್ಯರಸ್ತೆಗಳ ಬಳಿ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡರು. ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಚಾಲನೆ ನೀಡಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಕಸವನ್ನು ರಸ್ತೆ ಹಾಗೂ ಹಾಳುಬಿದ್ದ ಜಾಗೆಯಲ್ಲಿ ಹಾಕದಂತೆ ಈಗಾಗಲೇ ಎರಡು ವರ್ಷಗಳಿಂದ ಎಲ್ಲ ನಾಗರಿಕರಿಗೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಕಸವನ್ನು ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಮಿಕರಿಗೆ ಹಾಕಬೇಕಿದ್ದು, ರಸ್ತೆಯ ಪಕ್ಕದಲ್ಲಿ ಹಾಕಿದಲ್ಲಿ ದಂಡ ವಸೂಲು ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಗಾಂಧಿ ಜಯಂತ್ಯುತ್ಸವ ಅಂಗವಾಗಿ ಸಿಬ್ಬಂದಿಗಳು ಇಲ್ಲಿನ ಮುಖ್ಯರಸ್ತೆ, ವೃತ್ತ, ಡಿವೈಂಡರ್, ಕಚೇರಿ ಸುತ್ತಮುತ್ತ ಹಾಗೂ ಎಸ್‍ಜೆಜೆಎಂ ತಾಲೂಕು ಕ್ರೀಡಾಂಗಣ ಸೇರಿದಂತೆ ಹಲವೆಡೆ ಸ್ವಚ್ಛತಾ ಕಾರ್ಯಕ್ರಮ ಹಾಕಿಕೊಂಡಿದ್ದು, ಪ್ರತಿದಿನ ಬೆಳಗ್ಗೆ ಎಲ್ಲ ಸಿಬ್ಬಂದಿಗಳು ಹಾಜರಾಗಿ ಜನರಲ್ಲಿ ಇನ್ನಷ್ಟು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಾರೆ. ಪ್ರತಿಮನೆ ಹಾಗೂ ವ್ಯಾಪಾರಸ್ಥರಿಂದ ನಿಗಧಿಪಡಿಸಿದ ವಾರ್ಷಿಕ ಹಣವನ್ನು ಸಂಗ್ರಹಿಸಿ, 23 ವಾರ್ಡಗಳಲ್ಲಿ ಬೆಳಗ್ಗೆ ಕಾರ್ಮಿಕರ ತಂಡ ವಾಹನಗಳ ಮೂಲಕ ತೆರಳಿ, ಎಲ್ಲ ಕಸ ಸಂಗ್ರಹಿಸಿ ಕಸ ನಿರ್ವಹಣೆ ತ್ರ್ಯಾಜ್ಯ ಘಟಕಕ್ಕೆ ಕಳುಹಿಸುತ್ತಾರೆ. ಒಣಕಸ ಹಾಗೂ ಹಸಿಕಸ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಪ್ರತಿದಿನ ಕಸ ಸಂಗ್ರಹಿಸುವುದರಿಂದ ಸೊಳ್ಳೆ, ಕ್ರೀಮಿಕೀಟ ಉಂಟಾಗುವುದನ್ನು ತಡೆದು, ರೋಗರುಚಿನಗಳ ನಿಯಂಟ್ರಿಸಲು ಸಾಧ್ಯವಾಗುತ್ತದೆ ಯಾವುದೇ ಕಾರಣಕ್ಕೂ ಕಸ ಎಲ್ಲೆಂದರಲ್ಲಿ ಚೆಲ್ಲಬೇಡಿ ಎಂದು ಮನವಿ ಮಾಡಿದರು.ನಿಗದಿತ ಸಮಯದಲ್ಲಿ ತೆರಿಗೆ ಜಮೆ ಮಾಡಲು ಸಾರ್ವಜನಿಕರು ಮುಂದಾಗಬೇಕು. ಇದಕ್ಕಾಗಿ ಮೂರು ತಿಂಗಳು ರಿಯಾಯ್ತಿ ಕೂಡ ನೀಡಲಾಗಿತ್ತು. ಪುರಸಭೆ ಅಭಿವೃದ್ಧಿ ಇತರೆ ಸುಧಾರಣೆಗೆ ಸಾರ್ವಜನಿಕರ ತೆರಿಗೆ ಅಗತ್ಯವಾಗಿದ್ದು, ಇದಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ, ಕೂಡಲೇ ಎಲ್ಲರೂ ಹಣ ಸಂದಾಯಿಸಬೇಕೆಂದು ತಿಳಿಸಿದರು. ತೆರಿಗೆ ಸಂಬಂಧಿಸಿದ ಯಾವುದೆ ತಮಗೆ ಸಮಸ್ಯೆಯಿದ್ದಲ್ಲಿ ಕರವಸೂಲಾತಿ ಸಿಬ್ಬಂದಿಗಳು, ಪುರಸಭೆ ವ್ಯವಸ್ಥಾಪಕರನ್ನು ಬೇಟಿಯಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಪರೀವಿಕ್ಷಕ ಎಂ. ರವಿಕೀರ್ತಿ, ಪರಿಸರ ಅಭಿಯಂತರ ಹರಿಶಕುಮಾರ, ಪುರಸಭೆ ವ್ಯವಸ್ಥಾಪಕಿ ನಾಗರತ್ನಾ ಹೊಸಮನಿ, ಎಂ.ವೀರಾಚಾರ್ಯ, ಎಂ.ಹೆಚ್.ಬೋವಿ, ಮಾಲತೇಶ ಹಳ್ಳಿ, ತಪಸುಮ ಭಾನು, ಭಾಗ್ಯಮ್ಮ ಹಾವೇರಿ ಹಾಗೂ ಇತರರು ಉಸ್ಥಿತರಿದ್ದರು.