ರಾಣೇಬೆನ್ನೂರು: ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ರಟ್ಟಿಹಳ್ಳಿ ತಾಲೂಕಿನ ಯಡಗೋಡಿ ಗ್ರಾಮದ ರೈತ ಕರಬಸನಗೌಡ ಕಡೇಮನಿ ಅವರ ಜಮೀನಿನಲ್ಲಿ ಗೋವಿನ ಜೋಳದಲ್ಲಿ ಫಾಲ್ ಸೈನಿಕ ಹುಳು ಹಾಗೂ ಲಘುಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆಯ ಕಾರ್ಯಕ್ರಮ ಹಮ್ಮಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಅಶೋಕ ಪಿ. ಅವರು ಮಾತನಾಡಿ, ರೈತರು ಬೆಳೆ ಬೆಳೆಯುವ ಮುನ್ನ ಮಣ್ಣು ಪರೀಕ್ಷೆಗೊಳಿಸಿ ಅದರ ಆಧಾರದಲ್ಲಿ ಪೋಷಕಾಂಶಗಳನ್ನು ನಿರ್ವಹಣೆ ಮಾಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ.
ಅಲ್ಲದೆ ಬೆಳೆ ಕಾಲುಗೈ ಮಾಡುವುದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಹಾಗೂ ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು. ಕೀಟಶಾಸ್ತ್ರ ತಜ್ಞ ಡಾ.ಕೆ.ಪಿ.ಗುಂಡಣ್ಣವರ ಮಾತನಾಡಿ, ಗೋವಿನ ಜೋಳ ಬೆಳೆಗೆ ಫಾಲ್ ಸೈನಿಕ ಹುಳು ಒಂದು ಮಾರಕವಾಗಿ ಪರಿಣಮಿಸಿದ್ದು, ಇದರಿಂದ ಗೋವಿನಜೋಳ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಕೀಟವನ್ನು ಹತೋಟಿ ಮಾಡಲು ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಸೂಕ್ತವೆಂದರು. ಪ್ರಾತ್ಯಕ್ಷಿಕೆಯನ್ನು ಕೈಗೊಂಡ ಕರಬಸನಗೌಡ ಕಡೇಮನಿ ಇವರು ಮಾತನಾಡಿ, ಗೋವಿನ ಜೋಳದಲ್ಲಿ ಫಾಲ್ ಸೈನಿಕ ಹುಳು ಹಾಗೂ ಲಘುಫೊಷಕಾಂಶಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರಿಂದ ಹೆಚ್ಚಿನ ಇಳುವರಿ ಪಡೆಯಲಾಯಿತು ಎಂದರು. ಈ ಸಂದರ್ಭದಲ್ಲಿ ಬೇಸಾಯಶಾಸ್ತ್ರ ತಜ್ಞ ಡಾ. ಶಿವಮೂರ್ತಿ ಡಿ, ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.