ಬೆಳಗಾವಿ: ಇತ್ತೀಚಿಗೆ ಮಹಾಮಾರಿ ಕೊರೋನಾ ಸೋಂಕಿನಿಂದ ನಿಧನರಾದ ಕೇಂದ್ರ-ರಾಜ್ಯ ರೈಲ್ವೆ ಖಾತೆ ಸಚಿವ ದಿವಂಗತ ಸುರೇಶ ಅಂಗಡಿ ಅವರ ನಿವಾಸಕ್ಕೆ ಇಂದು ಮುಂಜಾನೆ ಸಿಎಂ. ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಗರದ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ದಿ.ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು. ಸುರೇಶ ಅಂಗಡಿ ನೆನೆದು ದುಃಖಿಸುತ್ತಿರುವ ವೃದ್ಧ ತಾಯಿಗೆ ಸಮಾಧಾನ ಹೇಳಿ, ಇನ್ನೂ ಅವರು ನೆನೆಪು ಮಾತ್ರ, ಒಳ್ಳೆಯ ವ್ಯಕ್ತಿತ್ವದ ಸ್ವಭಾವದವರು, ಸಜ್ಜನಿಕೆಯ ನಡುವಳಿಕೆಯವರು ಸದಾಹಸನ್ಮುಖಿ ವ್ಯಕ್ತಿಯಾಗಿದ್ದರು. ಇವೆಲ್ಲವನ್ನೂ ನೆನೆದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದಷ್ಟು ನಷ್ಟವಾಗಿದೆ. ದೇವರು ಈ ರೀತಿ ಅನ್ಯಾಯ ಮಾಡಬಾರದಿತ್ತು ದುಃಖಿಸಿದರು. ಅವರು ಆಸ್ಪತ್ರೆಯಲ್ಲಿ ಇದ್ದಾಗ ಅವರ ಆರೋಗ್ಯ ವಿಚಾರಿಸಿದಾಗ ಆರೋಗ್ಯವಾಗಿ ಇದ್ದೀನಿ ಎಂದು ಹೇಳಿದ್ದನ್ನು ಸ್ಮರಿಸಿದರು. ನಂತರ ಮಾತನಾಡಿದ ಅವರು, ದೆಹಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ನಿದರ್ಶನ ಮಾಡಿದ್ದೇವೆ, ರುದ್ರಭೂಮಿಯ ಅಭಿವೃದ್ಧಿಯ ಜೊತೆಗೆ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.