ರಾಣೇಬೆನ್ನೂರ: ಕೆಲವು ದಿನಗಳ ಹಿಂದೆ ನಡೆದ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಹಾಗೂ ಹತ್ಯೆಯನ್ನು ಖಂಡಿಸಿ ಅಲ್ಲಿಯ ಜನರಿಗೆ ಕಾನೂನಿನ ರಕ್ಷಣೆ ಇಲ್ಲ , ಕೂಡಲೇ ಅಲ್ಲಿಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಕಾರ್ಯಕರ್ತರು ಆಗ್ರಹಿಸಿದರು.
ಬುಧವಾರ ನಗರದ ಬಸ್‍ನಿಲ್ದಾಣದ ಬಳಿ ಪ್ರತಿಭಟಿಸಿ ನಂತರ ಉಪ ತಹಸೀಲ್ದಾರ ಎಂ.ಎನ್.ಹಾದಿಮನಿ ಮೂಲಕ ರಾಷ್ಟ್ರಪ್ರತಿಗಳು ಹಾಗೂ ಉತ್ತರ ಪ್ರದೇಶದ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಚಂದ್ರಪ್ಪ ಬೇಡರ ಮಾತನಾಡಿ, ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಆ ರಾಜ್ಯದಲ್ಲಿ ಪ್ರತಿ 30 ನಿಮಿಷಕ್ಕೊಂದು ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಇದರಿಂದ ಅಲ್ಲಿ ಬಡವರು, ದೀನ ದಲಿತರು, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ಹತ್ರಾಸ್ ದುಷ್ಕøತ್ಯದಲ್ಲಿ ಭಾಗಿಯಾಗಿರುವ ಠಾಕೂರ ಸಮುದಾಯದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಅವರುಗಳನ್ನೆಲ್ಲಾ ಗಲ್ಲಿಗೇರಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಅವರಲ್ಲಿ ಒಬ್ಬರಿಗೆ ಸರಕಾರಿ ಉದ್ಯೋಗ ಮತ್ತು ಒಂದು ಕೋಟಿ ರೂ. ಪರಿಹಾರ ನೀಡಬೇಕು. ಇಷ್ಟೆಲ್ಲಾ ಅರಾಜಕತೆಗೆ ಹೆಸರಾಗಿರುವ ಯೋಗಿ ಆದಿತ್ಯನಾಥ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ರವೀಂದ್ರಗೌಡ ಪಾಟೀಲ, ನಾಗರಾಜ ಎಸ್.ಎಸ್., ರಾಘವೇಂದ್ರ, ಕೆ.ಎಚ್.ಕುಲೇರ, ಗದಿಗೆಪ್ಪ ಮನೇಕಾರ, ಯಲ್ಲಪ್ಪ ಚಿಕ್ಕಣ್ಣನವರ, ಎಸ್.ಎಚ್.ಬಸೆನಾಯ್ಕರ್, ಚಂದ್ರಪ್ಪ ತಳವಾರ ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.