ಬೆಂಗಳೂರು :
ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಯೋಧ್ಯೆಗೆ ವೀರಶೈವ ಮಠಾಧೀಶರು ತೆರಳಿದ್ದರು. ಗುರುವಾರ ಕೆಂಪೇಗೌಡ ಗೌಡ ವಿಮಾನ ನಿಲ್ದಾಣದಲ್ಲಿ ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿಭೂತಿಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಚಾಣಕೋಟಿ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ, ಚೆನ್ನಗಿರಿ ವಿರಕ್ತಮಠದ ಶ್ರೀ. ಬಸವ ಜಯಚಂದ್ರ ಸ್ವಾಮೀಜಿ, ಗುಬ್ಬಿ ಸಂಸ್ಥಾನಮಠದ ಶ್ರೀ ವಿದ್ಯಾವಿಭವ ಸ್ವಾಮೀಜಿ ಅವರನ್ನು ಬೆಂಗಳೂರಿನಲ್ಲಿ ನಟ, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ನಿರ್ಮಾಪಕ, ಚಿಂತಕ ಕೆ.ಎನ್.ಚಕ್ರಪಾಣಿ,ಕೆ ಎಸ್ಎಂಎಫ್ ಉಪಾಧ್ಯಕ್ಷ ಅಪ್ಪಾಜಿಗೌಡರು, ಹಂಬಲ ಫುಡ್ ಪ್ರೊಡೆಕ್ಟ್ ನ ಸಿಇಒ ಡಾ. ಕೆ.ಭೀಮಾ, ಕೆಎಸ್ಎಂಎಫ್ ನಿರ್ದೇಶಕ ರವೀಂದ್ರ ಕುಮಾರ ಹಾಗೂ ಸಮರ್ಥನಂ ಟ್ರಸ್ಟ್ ನ ಪ್ರವೀಣ, ಚಿಕ್ಕೋಡಿಯ ವೇದಮೂರ್ತಿ ಮಹಾಂತೇಶ ಶಾಸ್ತ್ರೀಗಳು ಶ್ರೀಗಳನ್ನು ಸ್ವಾಗತಿಸಿ ನೂರಾರು ಜನ ಭಕ್ತರು ಶಾಲು ಹೊದಿಸಿ, ಸನ್ಮಾನಿಸಿ ಆನಂದ ಭಾಷ್ಪ ಸುರಿಸುತ್ತ, ನಾವು ರಾಮಲಲ್ಲಾ ಪ್ರತಿಷ್ಠಾಪನೆಗೆ ಬರಲು ಆಗಲಿಲ್ಲ. ನಿಮ್ಮನ್ನು ನೋಡಿದರೆ, ಸ್ವತಃ ರಾಮನನ್ನೇ ನೋಡಿದಷ್ಟು ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದೇವು ಎನ್ನುವ ತೃಪ್ತಿ ನಮಗೆ ಇದೆ ಎಂದರು.
ಬೆಂಗಳೂರಿನ ಡಾ. ಮಹಾಂತಲಿಂಗ ಸ್ವಾಮೀಜಿ ಅವರು ಮಾತನಾಡಿ, ದೇಶದಲ್ಲಿ ಹೊಸ ಮನ್ವಂತರ ರಾಮ ಮಂದಿರ ನಿರ್ಮಾಣವಾಗುವುದರ ಮೂಲಕ ಆರಂಭವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಕೊಟ್ಟೂರಿನ ಚಾಣುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸ್ವರ್ಗವೆ ಧರೆಗೆ ಇಳಿದ ಹಾಗೆ ಆಗಿತ್ತು ಎಂದರು.
ಚನ್ನಗಿರಿ ವಿರಕ್ತಮಠದ ಬಸವ ಜಯಚಂದ್ರ ಸ್ವಾಮೀಜಿ ಮಾತನಾಡಿ, ಈ ದೇಶಕ್ಕೆ ಒಂದು ದೊಡ್ಡ ಕೊಡುಗೆಯನ್ನು ನಮ್ಮ ಎಲ್ಲಾ ದೇಶ ಭಕ್ತರು ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು ರಾಮ ಮಂದಿರದ ಹಿಂದೆ ಸಾವಿರಾರು ರಾಮ ಭಕ್ತರ ತ್ಯಾಗ ಇದೆ ಎಂದರು.
ಗುಬ್ಬಿ ವಿರಕ್ತಮಠದ ವಿದ್ಯಾವಿಭವ ಸ್ವಾಮೀಜಿ ಮಾತನಾಡಿ, ಏನೋ ಒಂದು ಸಂತೃಪ್ತಿಯ ಭಾವ ನಮ್ಮಲ್ಲಿ ಉಂಟಾಯಿತು. ರಾಮನ ಮೂರ್ತಿಯನ್ನು ನೋಡಿ ಕಣ್ತುಂಬಿ ಬಂದಿತು ಎಂದರು.
ಚಿಂತಕ, ಚಲನಚಿತ್ರ ನಿರ್ಮಾಪಕ ಚಕ್ರಪಾಣಿ ಅವರು ಮಾತನಾಡಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇವೆ. ಬಹುಶಃ ಸಾವಿರು ಸಂತರು ಒಂದೆಡೆ ಸೇರುವ ಕಾರ್ಯಕ್ರಮ ಅರ್ಥಪೂರ್ಣ ಎಂದರು.