ಬೈಲಹೊಂಗಲ : ಅಬ್ಯಾಕಸನ ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಬೈಲಹೊಂಗಲ ನಾಡಿನ ಕೀರ್ತಿ ಬೆಳಗಿಸಿದ್ದ ಆರ್ಯನ್ ರಾಜು ಸೊಗಲ ಇವನಿಗೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಹಿರಿಯ ನಿವೃತ್ತ ನೌಕರರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸತ್ಕರಿಸಲಾಯಿತು.
ಭಗಳಾಂಬ ದೇವಸ್ಥಾನದ ಈರಯ್ಯ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿ, ನಿವೃತ್ತಿ ಹೊಂದಿದ ಸರ್ಕಾರಿ ನೌಕರರು ತಮ್ಮದೇ ಸಂಘ ಕಟ್ಟಿಕೊಂಡು ವಿವಿಧ ಜನಪಯೋಗಿ ಕಾರ್ಯ ಮಾಡುತ್ತಿರುವದು ಶ್ಲಾಘನೀಯ. ದೇಶದ ವಿವಿದ ಭಾಗದಲ್ಲಿ ನಡೆದ ಅಬ್ಯಾಕಸ್ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ನಮ್ಮ ನಾಡಿನ ಕೀರ್ತಿ ಪಾತಾಕೆ ದೇಶಾದ್ಯಂತ ಹಾರಾಡುವಂತೆ ಬೈಲಹೊಂಗಲದ ಕುವರ ಆರ್ಯನ ಸೊಗಲ ಆತನ ಕೀರ್ತಿ ಇನ್ನಷ್ಟು ಬೆಳಗಲಿ, ಮುಂದಿನ ದಿನಗಳಲ್ಲಿ ಆತ ವಿದೇಶಗಳಲ್ಲಿ ಆತನ ಪ್ರತಿಭೆ ತೋರಿಸುವಂತಾಗಲಿ ಎಂದರು.
ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡರ ಮಾತನಾಡಿ, ಆರ್ಯನ ಸೊಗಲ ಆತನಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡಾ ಬಾಲ್ಯದಿಂದಲೇ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದಾಗ ಮಾತ್ರ ಮುಂದೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಸಭೆಯಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಹಿರಿಯ ನಿವೃತ್ತ ನೌಕರರು ಇದ್ದರು.
ವರದಿ : ರವಿಕಿರಣ್ ಯಾತಗೇರಿ