ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಹುಕ್ಕೇರಿ ತಾಲೂಕಿನ ಅಂಕಲೆ ಗ್ರಾಮದಲ್ಲಿ ಸೋಮವಾರ, 18 ಡಿಸೆಂಬರ್ 2023ರಂದು ಕನ್ನಡ ಧ್ವಜ ಹಾರಿಸಿದ್ದಕ್ಕಾಗಿ ಕನ್ನಡ ಹುಡುಗರ ಮೇಲೆ ಹಲ್ಲೆ ನಡೆದಿತ್ತು. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಆದರೆ, ಇನ್ನೂ ನಾಲ್ಕು ಜನರನ್ನು ಬಂಧಿಸಲು ಕನ್ನಡಿಗರು ಆಗ್ರಹಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಸಮಿತಿ, ಸಂಕೇಶ್ವರದ ಸಮಸ್ತ ಕನ್ನಡಿಗರು ಈ ಕುರಿತು ಒಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ, "ಕನ್ನಡ ಧ್ವಜ ಹಾರಿಸಿದ್ದಕ್ಕಾಗಿ ಕನ್ನಡ ಹುಡುಗರ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಆದರೆ, ಇನ್ನೂ ನಾಲ್ಕು ಜನರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಮಾನ್ಯ ಸಿ.ಪಿ.ಐ. ಮತ್ತು ಪಿ.ಎಸ್.ಐ. ಸಾಹೇಬರಿಗೆ ಹಲವಾರು ಬಾರಿ ಕೇಳಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ವಿನಂತಿಸುತ್ತೇವೆ" ಎಂದು ದೀಪಕ್ ಗುಡಗನಟ್ಟಿ ತಿಳಿಸಿದ್ದಾರೆ.