ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಅತಿ ದೊಡ್ಡ 6 ತಾಲೂಕುಗಳ ಉಪವಿಭಾಗ ಕೇಂದ್ರ, ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಐತಿಹಾಸಿಕ ನಾಡು ಸಂಜೆಯಾಗುತ್ತಲೆ ಕತ್ತಲೆಗೆ ಜಾರುತ್ತಿದೆ.
ಕುಂದಾನಗರಿ ಬೆಳಗಾವಿ, ವಿದ್ಯಾಕಾಶಿ ಧಾರವಾಡ ಹಾಗೂ ಹಲವಾರು ಜಿಲ್ಲಾ ಕೇಂದ್ರಗಳ ಮಧ್ಯಭಾಗದಲ್ಲಿರುವ ಬೈಲಹೊಂಗಲ ಶಹರ ಬೆಳಗಿನಿಂದ ಸಂಜೆಯವರೆಗೂ ಜನನಿಬಿಡ ಪ್ರದೇಶವಾಗಿದ್ದು ಸಂಜೆಯಾಗುತ್ತಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡು ನಿಶಬ್ದವಾಗಿ ಬಿಡುತ್ತದೆ.ಕಾರಣ ಇಷ್ಟೇ..
ಶಹರ ಪ್ರದೇಶವು ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ ಸಹ ರಾತ್ರಿ 8 ಗಂಟೆಯಾಗುತ್ತಲೆ ಸಾರಿಗೆ ವಾಹನಗಳ ಓಡಾಟ ಕಡಿಮೆಯಾಗುತ್ತದೆ. ಬಸ್ಸಗಳು ಇಲ್ಲದೇ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ ಬಿಕೋ ಎನ್ನುತ್ತಿರುತ್ತದೆ. ಇದರಿಂದ ವಾಹನ ಸಂಚಾರವಿಲ್ಲದೆ, ಜನರ ಓಡಾಟವಿಲ್ಲದೆ ಸಂಜೆಯಾಗುತ್ತಲೆ ಎಲ್ಲವೂ ನಿಶಬ್ದ.
ಬೆಳಗಾವಿಯಿಂದ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡು ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯು ಇದ್ದು ಇದು ಬೈಲಹೊಂಗಲ ಮಾರ್ಗವಾಗಿ ನೇಸರಗಿ, ಗೋಕಾಕ, ಮೂಡಲಗಿ ಹಾರೂಗೇರಿ ಮೂಲಕ ಜತ್ತ ಗ್ರಾಮವನ್ನು ಸಂಧಿಸುತ್ತದೆ. ಅದೇ ರೀತಿ ಬೆಳಗಾವಿಯಿಂದ ದೂರದ ಹೈದ್ರಾಬಾದ, ರಾಯಚೂರು, ಬಳ್ಳಾರಿ,ಕಲ್ಬುರ್ಗಿ ಕಡೆಗೆ ತೆರಳಬೇಕಾದರೆ ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಸಾರಿಗೆ ಸಂಸ್ಥೆಯ ಬಸ್ಸಗಳು, ಖಾಸಗಿ ವಾಹನಗಳ ಓಡಾಟ ದಿನದ 24 ಗಂಟೆಗಳ ಕಾಲ ನಿರಂತರವಾಗಿರುತ್ತದೆ. ಈ ಮಾರ್ಗವಾಗಿ ದಿನಕ್ಕೆ ಸುಮಾರು ನೂರು ಸಾರಿಗೆ ಸಂಸ್ಥೆಯ ಬಸ್ಸಗಳು ಸಂಚರಿಸುತ್ತವೆ. ರಾತ್ರಿಯಾಗುತ್ತಲೇ ಈ ಬಸ್ಸುಗಳ ಮಾರ್ಗ ಬದಲಾವಣೆ ಮಾಡಿ, ಬೆಳಗಾವಿ- ನೇಸರಗಿ- ಬೈಲಹೊಂಗಲ ಮೂಲಕ ಮುರಗೋಡ, ಯರಗಟ್ಟಿ ಮಾರ್ಗವಾಗಿ ಮತ್ತು ಅದೇ ಆ ಕಡೆಯಿಂದ ಬೆಳಗಾವಿಗೆ ತೆರಳುವ ಬಸ್ಸುಗಳು ಯರಗಟ್ಟಿ, ಮುರಗೋಡ, ಬೈಲಹೊಂಗಲ ಮಾರ್ಗವಾಗಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯ ಮೂಲಕ ಸಂಪಗಾವ, ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬೆಳಗಾವಿಗೆ ಸಂಚರಿಸುವ. ಯೋಜನೆ ರೂಪಿಸಿ, ತಡರಾತ್ರಿಯು ಕೂಡ ಬೈಲಹೊಂಗಲ ಶಹರದ ಕಡೆಗೆ ವಾಹನಗಳ ಓಡಾಟ, ಜನರ ಸಂಚಾರ ಹೆಚ್ಚಾದಂತೆ ಇಲ್ಲಿಯೂ ಕೂಡಾ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ಬು ತೆರೆದು ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸುವದರ ಜೊತೆಗೆ ಪಟ್ಟಣವು ಕೂಡಾ ದಿನದ 24 ಗಂಟೆ ಎಚ್ಚರವಾಗಿತ್ತದೆ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಸಚಿವರು ಈ ಕುರಿತು ಗಮನ ಹರಿಸಿದರೆ ಪಟ್ಟಣದ ಅಭಿವೃದ್ಧಿ ಮತ್ತು ಬಡ, ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಅನೂಕೂಲವಾಗುತ್ತದೆ.
ಬೆಳಗಾವಿಯಿಂದ ಯರಗಟ್ಟಿ 64 ಕಿ.ಮೀ ಇದ್ದು ಮಧ್ಯದಲ್ಲಿ ಅಷ್ಟೊಂದು ಗ್ರಾಮಗಳು ಬರುವದಿಲ್ಲ. ಅದೇ ಬೆಳಗಾವಿಯಿಂದ ಹಿರೇಬಾಗೇವಾಡಿ, ಸಂಪಗಾವ, ಬೈಲಹೊಂಗಲ,ಮುರಗೋಡ ಹಲಕಿ ಕ್ರಾಸ ಮೂಲಕ ಯರಗಟ್ಟಿ 73 ಕಿ.ಮೀ ಸಂಚಾರ ನಡೆಸಬಹುದು ಇಲ್ಲಿ ಬೆಳಗಾವಿಯಿಂದ ತಡರಾತ್ರಿ ತಮ್ಮ ಗ್ರಾಮಗಳಿಗೆ ಸಾರ್ವಜನಿಕರು ಸುಲಭವಾಗಿ ಸಂಚರಿಸಬಹುದು ಮತ್ತು ನಡುವೆ ಹೊಟೇಲ, ಪಂಚರ ಅಂಗಡಿ ಮುಂತಾದವುಗಳನ್ನು ಸ್ಥಾಪಿಸಬಹುದು ಇದರಿಂದ ಉದ್ಯಮ ಹೆಚ್ಚಾಗುವದರ ಜೊತೆಗೆ ಗ್ರಾಮಗಳ ಅಭಿವೃದ್ಧಿಗೂ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುವದು ಇಲ್ಲಿನ ಗ್ರಾಮಸ್ಥರ ಆಶಯ.
ರಾತ್ರಿ ಆದಂಗ ಇಲ್ಲಿ ಜನರ ಓಡಾಟ ಬಂದ ಆಕೇತಿ ಮುಂಜಾನಿಂದ ಸಂಜಿವರೆಗೂ ಕೆಲಸ ಮಾಟಿದರೂ ಸಹ ಅಂಗಡಿ ಬಾಡಿಗೆ ಕಾರ್ಮಿಕರ ಸಂಬಳ ಮುಂತಾದ ಖರ್ಚುವೆಚ್ಚಗಳನ್ನು ಸರಿದೂಗಿಸುವದು ಕಷ್ಟವಾಗಿದೆ. ಸಾರಿಗೆ ಇಲಾಖೆ ತಮ್ಮ ಸಂಸ್ಥೆಯ ಬಸ್ಸುಗಳ ಮಾರ್ಗ ಬದಲಾವಣೆ ಮಾಡಿದರೆ ಜನರ, ವಾಹನಗಳ ಓಡಾಟ ಹೆಚ್ಚಾಗಿ ಆದಾಯವು ಹೆಚ್ಷಾಗುತ್ತದೆ. ...ಬಸವರಾಜ ಚಿವಟಗುಂಡಿ ಪಂಚರ ಅಂಗಡಿ ಮಾಲಿಕ
ವರದಿಗಾರ : ರವಿಕಿರಣ್ ಯಾತಗೇರಿ