ಬೈಲಹೊಂಗಲ : ಇಲ್ಲಿನ ಜನ ಮೊದಲಿನಿಂದಲೂ ಶಾಂತಿಪ್ರೀಯರು. ಅನ್ಯಾಯವಾದರೆ ಶಾಂತಿ ಮರೆತು ಕ್ರಾಂತಿಯನ್ನು ಎದುರಿಸಬೇಕಾದಿತು ಎಂದು ಜಿಲ್ಲಾ ವಿಭಜನೆ ಹೋರಾಟ ಸಮಿತಿ ಅಧ್ಯಕ್ಷ ಚಿತ್ರನಟ ಶಿವರಂಜನ ಬೋಳಣ್ಣವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸರ್ಕಾರ ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಗೆ ಮುಂದಾಗಿದ್ದು ಇದನ್ನು ವಿರೋಧಿಸಿ, ಇಂದು ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಸೇರಿದ ಜಿಲ್ಲಾ ವಿಭಜನಾ ಹೋರಾಟಗಾರರ ಸಭೆಯಲ್ಲಿ ಅವರು ಮಾತನಾಡಿ, ಬೈಲಹೊಂಗಲ ನಾಡಿನ ಜನ ಮೊದಲಿನಿಂದಲೂ ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸುತ್ತಾ ಬಂದಿದ್ದಾರೆ. ಈ ಕುರಿತು ಸಾಕಷ್ಟು ಹೋರಾಟಗಳು ಕೂಡಾ ನಡೆದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಚ್ಚರಿಕೆ ನಡೆ ಅನುಸರಿಸಬೇಕೆಂದರು.
ಈ ಹಿಂದೆಯೂ ಕೂಡ ಅಖಂಡ ಬೆಳಗಾವಿ ಜಿಲ್ಲೆ ವಿಭಜನೆಯ ಕೂಗು ಎದ್ದಾಗ ಇಲ್ಲಿನ ಜನರ ಆಕ್ರೋಶ, ಕ್ರಾಂತಿಯ ಸಂದೇಶವನ್ನು ಅಂದಿನ ಸರ್ಕಾರಗಳು ನೋಡಿವೆ. ಮತ್ತೆ ಈಗೀನ ಸರ್ಕಾರ ಜಿಲ್ಲಾ ವಿಭಜನೆ ಮಾಡುವ ಸಂದೇಶ ನಾಡಿನೆಲ್ಲೆಡೆ ಪಸರಿಸಿದೆ. ಈಗಾಗಲೇ ಇಲ್ಲಿನ ಜನ ರೊಚ್ಚಿಗೆದ್ದಿದ್ದಾರೆ. ಒಂದು ವೇಳೆ ಜಿಲ್ಲಾ ವಿಭಜನೆ ಅನಿವಾರ್ಯವಾದರೆ, ಬೈಲಹೊಂಗಲ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಇಲ್ಲಾವಾದಲ್ಲಿ ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿಯೇ ಅತಿ ದೊಡ್ಡ ಉಪವಿಭಾಗವಾದ ಬೈಲಹೊಂಗಲ ತಾಲೂಕಾ ಕೇಂದ್ರವನ್ನು ಜಿಲ್ಲೆಯಾಗಿ ಮೊದಲು ಘೋಷಣೆ ಮಾಡಲಿ ಎಂದರು.
ಮುಖಂಡರಾದ ಮಹಾಂತೇಶ ತುರಮರಿ, ಜೆಡಿಎಸ್ ಜಿಲ್ಲಾ ಮುಖಂಡ ಶಂಕರ ಮಾಡಲಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬೈಲಹೊಂಗಲ ಭಾಗದಿಂದ ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ನಾಳಿನ ಬಜೆಟನಲ್ಲಿ ಸರ್ಕಾರ ಬೆಳಗಾವಿ ಜಿಲ್ಲೆ ವಿಭಜಿಸಿ ಬೇರೆ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾದಿತು ಎಂದರು.
ವಿವಿದ ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ, ನಾಳಿನ ಬಜೆಟ್ ಅಧಿವೇಶನದಲ್ಲಿ ಬೈಲಹೊಂಗಲ ಬಿಟ್ಟು ಬೇರೆ ತಾಲೂಕು ಘೋಷಣೆ ಮಾಡಿದ್ದೇ ಆದಲ್ಲಿ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಾರ್ವಜನಿಕರು, ಜಿಲ್ಲಾ ವಿಭಜನಾ ಸಮಿತಿ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.
ವರದಿ : ರವಿಕಿರಣ್ ಯಾತಗೇರಿ