ಆಮ್ ಆದ್ಮಿಯಿಂದ ನಗರದಲ್ಲಿ ಬೈಕ್ ರ್ಯಾಲಿ

  • 14 Jan 2024 , 11:31 PM
  • Belagavi
  • 180

ಬೆಳಗಾವಿಯ ಸಾರಿಗೆ ಸಂಸ್ಥೆ ಹಾಗೂ ವಿಮಾನ ಸೇವೆ ಸ್ಥಗೀತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಸ್ಥಳೀಯ ಶಾಸಕರು ಹಾಗೂ ಸಂಸದರು ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಆರೋಪಿಸಿದರು.

ಭಾನುವಾರ ನಗರದಲ್ಲಿ ಆಮ್ ಆದ್ಮಿ ಪಕ್ಷದಿಂದ ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ‌ಜಿಲ್ಲೆಗೆ ಬರಬೇಕಾಗಿದ್ದ ಯೋಜನೆಗಳು ಬೇರೆ ಜಿಲ್ಲೆಗೆ ಹೋಗುತ್ತಿರುವುದರಿಂದ ಇಲ್ಲಿನ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ. ಬೆಳಗಾವಿ ನಗರದಲ್ಲಿ ಉದ್ಯಮಿಗಳ ಸಮಸ್ಯೆ, ಯುವಕರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಆಮ್ ಆದ್ಮಿ ಪಾರ್ಟಿ ಪರ್ಯಾಯವಾಗಿದೆ ಎಂದರು.

ಕಳೆದ ಸುಮಾರು ವರ್ಷಗಳಿಂದ ಬೆಳಗಾವಿಯ ಭ್ರಷ್ಟಾಚಾರದ ಬಗ್ಗೆ ಆಮ್ ಆದ್ಮಿ ಬೆಳಕು ಚೆಲ್ಲಿದ್ದೇವೆ. ಸ್ಮಾರ್ಟ್ ಸಿಟಿ, ಬುಡಾದಲ್ಲಿ‌ ಸುಮಾರು 150 ಕೋಟಿ ರೂ. ಭ್ರಷ್ಟಾಚಾರವಾಗಿದೆ. ಇಷ್ಟೆಲ್ಲಾ ಆದರೂ ಸ್ಥಳೀಯ ಶಾಸಕರು ಈ ಕುರಿತಾಗಿ ಧ್ವನಿ ಎತ್ತಿಲ್ಲ. ಅವರು ಪ್ರತಿಕ್ರಿಯಿಸಿದೆ ಇರುವುದದಿಂದ ಅವರು ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಾಕಷ್ಟು ಗೌರವ ಇದೆ. ಬೆಳಗಾವಿ ಉತ್ತರ ಹಾಗೂ ದಕ್ಷಿಣ ‌ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ಅವರು ಬಂದು ಇಲ್ಲಿ ಶಾಸಕರು ಆಗಲು ಸಾಧ್ಯವಿಲ್ಲ. ಆ ಅನುದಾನ ಎಲ್ಲಿ ಹೊಯಿತು ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ  ಬೆಳಗಾವಿ ಉತ್ತರ ಮತಕ್ಷೇತ್ರದ  ಮಹಾಂತೇಶ ನಗರದ ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಸುರಭಿ ಹೋಟೆಲ್ ರಸ್ತೆ, ಕಣಬರಗಿ ರಸ್ತೆ, ಕಿಲ್ಲಾ ಕೆರೆ, ಆರ್ ಟಿಓ ವೃತ್ತ, ಚನ್ನಮ್ಮ ವೃತ್ತ, ಕಾಕತಿ ವೇಸ್, ಗಣಪತಿಗಲ್ಲಿ, ಮಾರುತಿಗಲ್ಲಿ, ರಾಮದೇವಗಲ್ಲಿ, ಸಮಾದೇವಿ ಗಲ್ಲಿ, ವನಿತಾ ವಿದ್ಯಾಲಯ, ಬೋಗಾರವೇಸ್ ದಿಂದ ಜಿಲ್ಲಾಸ್ಪತ್ರೆ ರಸ್ತೆ, ಸಂಗಮೇಶ್ವರ ನಗರ( ಡ್ಯಾನ್ ಬ್ರೋ ಸರ್ಕಲ್) ಅಜಂನಗರ ಪೆಟ್ರೋಲ್ ಪಂಪ್ ವೃತ್ತ, ನೆಹರೂನಗರ, ಹನುಮಾನ ಹೋಟೆಲ್, ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು, ಶಿವಬಸವನಗರ, ಶ್ರೀನಗರ ಗಾರ್ಡನ್, ಸಂಗೊಳ್ಳಿ ರಾಯಣ್ಣ ಕಾಲೇಜು ಮಾರ್ಗವಾಗಿ ಮರಳಿ ಮಹಾಂತೇಶ ನಗರದ ಆಮ್ ಆದ್ಮಿ ಪಕ್ಷದವರೆಗೆ ಬೈಕ್ ರ್ಯಾಲಿ ನಡೆಸಿದರು.

Read All News