ಗಂಗಾವತಿ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಸ್ಪಂದನೆ ಉತ್ತಮವಾಗಿದೆ : ಶಾಸಕ ಗಾಲಿ ಜನಾರ್ದನ ರೆಡ್ಡಿ

  • Shivaraj Bandigi
  • 14 Jan 2024 , 11:13 PM
  • Koppal
  • 169

ಗಂಗಾವತಿ :- ಗಂಗಾವತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ಅನುದಾನವನ್ನು ನೀಡುತ್ತೇನೆ ಎನ್ನುವ ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಿಳಿಸಿದರು.

ಗಂಗಾವತಿ ನಗರದಲ್ಲಿಂದು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರೋಬ್ಬರಿ 14 ಬಾರಿ ಬಜೆಟ್ ಮಂಡಿಸಿದ್ದಾರೆ, ಆರ್ಥಿಕ ವ್ಯವಸ್ಥೆ ಬಗ್ಗೆ ಅವರಿಗೆ ಅನುಭವ ಚೆನ್ನಾಗಿದೆ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತದೆ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಭರವಸೆಯನ್ನು ವ್ಯಕ್ತಪಡಿಸಿದರು.

ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿ ಆಗುತ್ತೆ ಎನ್ನುವ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ 
ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಗಾಲಿ ಜನಾರ್ದನ ರೆಡ್ಡಿ  ಸಂತೋಷ ಹೆಗ್ಡೆ ಅವರಿಗೆ ಏನು ರಾಜಕೀಯ ಅನುಭವ ಇದೆ. ಸಂತೋಷ ಹೆಗ್ಡೆ ಅವರ ಮಾತುಗಳು ವೇಸ್ಟ್ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ರಾಜ್ಯದ ಏಳು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ, ಎನ್ ಡಿ ಎ ಅಥವಾ ಇಂಡಿಯಾ ಪರ ನಿಲ್ಲುವುದಿಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟವಾಗಿ ಹೇಳುವ ಮೂಲಕ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುವ ಸೂಚನೆ ನೀಡಿ.ಬರುವ
ಸೆಪ್ಟೆಂಬರ್ ತಿಂಗಳಿನಿಂದ ಇನ್ನಷ್ಟು ಪಕ್ಷ ಸಂಘಟನೆಗೆ ಒತ್ತು ನೀಡ್ತಿನಿ ಎಂದು ಹೇಳಿದರು.

ತಿರುಪತಿಗೆ ನಂದಿನಿ ತುಪ್ಪ ಸ್ಥಗಿತ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಇಂತಹ ನಿರ್ಧಾರ ಯಾವಾಗಲೂ ಒಳ್ಳೆಯದಲ್ಲ ಎಂದರು. ತಿರುಪತಿಯ ಭಗವಂತನ ಸೇವೆಗೆ ಕರ್ನಾಟಕ ಕೊಡುಗೆ ಇತ್ತು ಎನ್ನುವ ಹೆಮ್ಮೆ ಇತ್ತು. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮುಖ್ಯಮಂತ್ರಿ ಗಳಿಂದ ಮಾತ್ರ ಸಾಧ್ಯ ಎಂದರು.
ಈ ವಿಷಯದಲ್ಲಿ  ಸಿದ್ದರಾಮಯ್ಯನವರು ಮುತುವರ್ಜಿ ವಹಿಸಬೇಕೆಂದು ಶಾಸಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು, ಯುವ ಘಟಕದ ರಾಜ್ಯ ಅಧ್ಯಕ್ಷ ಭೀಮಾಶಂಕರ ಪಾಟೀಲ್, ಯಮನೂರು ಚೌಡಕಿ, ರಾಜೇಶ್ ರೆಡ್ಡಿ, ಲಿಂಗನಗೌಡ, ಜಿಲಾನಿ ಪಾಷ, ಮುಸ್ತಾಕ್ ಅಲಿ, ಹುಸೇನ್ ಬಾಷ ಸೇರಿದಂತೆ ಅನೇಕರು ಇದ್ದರು.

Read All News