ಬೆಳಗಾವಿ :
ವಕೀಲ ಪ್ರೀತಮ್ ಮೇಲೆ ಚಿಕ್ಕಮಗಳೂರು ಪೊಲೀಸರು ಹಲ್ಲೆ, ಠಾಣೆಯಲ್ಲಿ ನಡೆಸಿರುವ ಕ್ರಮವನ್ನು ಖಂಡಿಸಿ ಹಾಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ಬೆಳಗಾವಿಯ ಸಾವಿರಾರು ವಕೀಲರು ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ವಕೀಲರಿಗಾಗಿ ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರಬೇಕು. ಅಲ್ಲದೆ ಚಿಕ್ಕಮಗಳೂರು ನಗರ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಕ್ರಮ ಸರಿಯಲ್ಲ. ಆದ್ದರಿಂದ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ನಡೆಯುತ್ತಿರುವುದರಿಂದ ಸರಕಾರದ ಸಚಿವರು, ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷರು ತೆರಳು ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆಯಿಂದ ಹಿಡಿಶಾಪ ಹಾಕಿದ್ದ ಜನರಿಗೆ ವಕೀಲರ ಪ್ರತಿಭಟನೆಯಿಂದಲೂ ಚನ್ನಮ್ಮ ವೃತ್ತದಲ್ಲಿ ಕಿರಿಕಿರಿಯಾಯಿತು. ಕಾನೂನು ಪಾಠ ಹೇಳುವ ವಕೀಲರೇ ಸಾರ್ವಜನಿಕರ ಎದುರು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಸಾರ್ವಜನಿಕರು ವಕೀಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಸುರೇಂದ್ರ ಉಗಾರೆ, ಆರ್.ಪಿ.ಪಾಟೀಲ, ಅನಂತ ಮಾಂಜ್ರೆಕರ , ಬಾಲಕೃಷ್ಣ ಕಾಂಬಳೆ, ವಿನೋದ ಪಾಟೀಲ್, ಹೆಗ್ಗನ್ನವರ, ಮಲ್ಲಾಪೂರೆ, ಸುಮೀತ, ಮಂಗಳಾ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.