ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಮಿಷನ್ 123 ಪೂರ್ಣಗೊಳಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಭಾನುವಾರ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಚಿಕ್ಕೋಡಿ ಮತ್ತು ಬೆಳಗಾವಿ ಜೆಡಿಎಸ್ ಕಾರ್ಯಕರ್ತರ ಜತೆಗೆ ಮುಕ್ತವಾಗಿ ಚರ್ಚೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿಗರು ಇರುವುದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬರುವ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯದ ವ್ಯಕ್ತಿ, ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷವಲ್ಲ. ಪ್ರಾದೇಶಿಕ ಪಕ್ಷ. ಚಿಂತನೆಗಾಗಿ ಹುಟ್ಟಿಕೊಂಡ ಪಕ್ಷ. ನಾನು ಅಧ್ಯಕ್ಷನಾದ ಮೇಲೆ ಸಾಕಷ್ಟು ಬದಲಾವಣೆ ತಂದಿದ್ದೇನೆ. ಹಿಂದಿನ ಪರಂಪರೆಯನ್ನು ಇಂದು ಕರ್ನಾಟಕದಲ್ಲಿ ತಂದಿದ್ದೇನೆ. 2023ಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಅವರ ಅವರಲ್ಲಿಯೇ ಕಿತ್ತಾಡಿಕೊಂಡು ಹೋರಟಿದ್ದಾರೆ. ಬಿಜೆಪಿ40%, ಕಾಂಗ್ರೆಸ್ 20% ನಾವು ಯಾರಿಗೂ ಆರೋಪ ಮಾಡುತ್ತಿಲ್ಲ. ರಾಜ್ಯದಲ್ಲಿ ಜೆಡಿಎಸ್ ಏನು ಮಾಡುತ್ತದೆ ಎಂದು ರಾಜ್ಯದ ಜನರ ಮುಂದೆ ಹೇಳಿ ಅಧಿಕಾರಕ್ಕೆ ಬರುತ್ತೇವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್ ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ಭೀಮಪ್ಪ ಗಡಾದ, ನಾಸೀರ ಭಾಗವಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.