ಬೆಳಗಾವಿ: ಕೆ.ಎಸ್.ಆರ್.ಪಿ ಎಂದರೆ ರಾಜ್ಯದ ಸೇನಾ ಪಡೆ ಇದ್ದಂತೆ. ರಾಜ್ಯದಲ್ಲಿ ಹುಟ್ಟಿಕೊಳ್ಳುವ ಸಮಾಜಘಾತುಕ ಶಕ್ತಿಗಳನ್ನು ತಡೆಯಲು ಇದು ಪ್ರಮುಖಪಾತ್ರ ವಹಿಸುತ್ತದೆ. ಈ ಸಂಸ್ಥೆಯ ನೂತನ ಸಿಬ್ಬಂದಿ ರಾಷ್ಟ್ರಧ್ವಜ ಎದರು ಪ್ರತಿಜ್ಞೆ ಮಾಡಿದ್ದನ್ನು ಜೀವನಪೂರ್ತಿ ಮರೆಯಬಾರದು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕೆ.ಎಸ್.ಆರ್.ಪಿ ಪೊಲೀಸ್ ಮಹಾ ನಿರೀಕ್ಷಕರಾದ ರವಿ ಎಸ್. ಅವರು ಹೇಳಿದರು.
ಕೆ.ಎಸ್.ಆರ್.ಪಿ ತರಬೇತಿ ಶಾಲೆ ಕಂಗ್ರಾಳಿ ಆವರಣದಲ್ಲಿ ಶುಕ್ರವಾರ ನಡೆದ ಬೆಳಗಾವಿ 8 ನೇ ತಂಡದ ಮತ್ತು ಕೆ.ಎಸ್.ಆರ್.ಪಿ ತರಬೇತಿ ಶಾಲೆ ಮುನಿರಾಬಾದ್ ನ 25 ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪರಿವೀಕ್ಷಣೆ ಮಾಡಿ ಅವರು ಮಾತನಾಡಿದರು.
ಪೊಲೀಸ್ ತರಬೇತಿಯ ಮುಖ್ಯ ಉದ್ದೇಶ ಪ್ರಶಿಕ್ಷಣಾರ್ಥಿಗಳ ಮನೋಬಲ ಬೆಳೆಸುವುದಾಗಿದೆ. ಜನರ ಆಸ್ತಿ-ಪಾಸ್ತಿ, ಜೀವ ರಕ್ಷಣೆ ಇದು ಪೊಲೀಸರ ಜವಾಬ್ದಾರಿಯಾಗಿದ್ದು, ಪೊಲೀಸರ ದೇಹ ಮತ್ತು ಆತ್ಮ, ತೆರೆದ ಪುಸ್ತಕದಂತೆ ಕಾರ್ಯನಿರ್ವಹಿಸಬೇಕು ಎಂದರು.
ಸೇವಾನಿತರ ಸಮಯದಲ್ಲಿ ಎದುರಾಗುವ ಸಮಸ್ಯೆಗಳ ಜೊತೆಗೆ ಜನಸ್ನೇಹಿಯಾಗಿ ಯಾವ ರೀತಿ ಕಾರ್ಯನಿರ್ವಹಿಸಬೇಕು. ಬಿಸಿಲು, ಮಳೆ, ಚಳಿ, ಹಗಲು, ರಾತ್ರಿ ಎನೇ ಇರಲಿ ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ದೇಯಿಂದ, ತ್ಯಾಗ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಪ್ರಶಿಕ್ಷಣಾರ್ಥಿಗಳು ಉತ್ತಮ ರೀತಿಯ ಕವಾಯತು ಪ್ರದರ್ಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮ ರೀತಿಯಲ್ಲಿ ಕವಾಯತ್ತು ಪ್ರದರ್ಶನ ನೀಡುವ ರೀತಿಯಲ್ಲಿ ತರಬೇತಿ ನೀಡಬೇಕು ಎಂದು ತರಬೇತಿದಾರರಿಗೆ ಸೂಚನೆ ನೀಡಿದರು.
ಕೆಲಸದ ಒತ್ತಡದೊಂದಿಗೆ ತ್ಯಾಗಮಯ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಒಂದು ಗಂಟೆ ಸಮಯ ಪಡೆದು ತರಬೇತಿಯಲ್ಲಿ ಕಲಿತ ಕಸರತ್ತು ಮರೆಯದೇ ಮಾಡಬೇಕು. ಇದರಿಂದ ದೈಹಿತ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಕೆ.ಎಸ್.ಆರ್.ಪಿ ಪ್ರಶಿಕ್ಷಣಾರ್ಥಿಗಳ ತರಬೇತಿಯ ವಾರ್ತಾ ಪತ್ರಿಕೆಯನ್ನು ಬೀಡುಗಡೆ ಮಾಡಿದರು. ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಾರ್ಥಿಗಳು ತರಬೇತಿ ವಿವಿಧ ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಅತೀ ಹೆಚ್ಚು ಅಂಕಪಡೆದ ಪ್ರಶಿಕ್ಷಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಕೆ.ಎಸ್.ಆರ್.ಪಿ ತರಬೇತಿ ಶಾಲೆ ಕಂಗ್ರಾಳಿಯ ಪ್ರಾಂಶುಪಾಲರಾದ ರಮೇಶ್ ಎ. ಬೋರಗಾವೆ ಅವರು ಸರ್ವರನ್ನು ಸ್ವಾಗತಿಸಿ, ಪ್ರಶಿಕ್ಷಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ವರದಿ ವಾಚನ ನೀಡಿದರು.
ಬೆಳಗಾವಿ ಉತ್ತರ ವಲಯದ ಐ.ಜಿ.ಪಿ ಎನ್.ಸತೀಶಕುಮಾರ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ, ಕೆ.ಎಸ್.ಆರ್.ಪಿ ಉಪ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ವಿ. ರಾಮಕೃಷ್ಣ ಪ್ರಸಾದ್, ಮುನಿರಾಬಾದ್ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಮುದ್ದೇಪಾಲ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸಂಜೀವ ಪಾಟೀಲ, ಬೆಳಗಾವಿ ಮತ್ತು ಮುನಿರಾಬಾದ್ ನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.