ಬಾರದ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ, ಮೆರವಣಿಗೆ, ಭರ್ಜರಿ ಊಟ

  • Shivaraj Bandigi
  • 14 Jan 2024 , 11:55 PM
  • Belagavi
  • 505

ಅಥಣಿ : ಮಳೆ ಅಭಾವ ಸೃಷ್ಠಿಯಾಗಿರುವ ಬೆನ್ನಲ್ಲೆ ಮಳೆಗಾಗಿ ಪ್ರಾರ್ಥಿಸಿ ಅಥಣಿ ಗ್ರಾಮೀಣ ಭಾಗದ ತಂಗಡಿ ರಸ್ತೆಗೆ ಹೊಂದಿಕೊಂಡ ಗಣೇಶ ನಗರದ ನಿವಾಸಿಗಳೆಲ್ಲ ಸೇರಿ ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿರುವ ಪ್ರಸಂಗ ನಡೆದಿದೆ.

ಗ್ರಾಮದಲ್ಲಿರುವ ಗಂಡು ಮತ್ತು ಹೆಣ್ಣು ಕತ್ತೆಯನ್ನು ಹುಡುಕಿ ತಂದು ಗಂಡು ಕತ್ತೆಗೆ ಹೊಸ ಪಂಚೆ, ಟವಲು ತೊಡಿಸಿದರೆ ಹೆಣ್ಣು ಕತ್ತೆಗೆ ಸೀರೆ, ಖಣ ತೊಡಿಸಿದರು. ಅರಿಷಿಣ, ಸುರಗಿ ಶಾಸ್ತ್ರವನ್ನು ಮಹಿಳೆಯರು ನೆರವೇರಿಸಿದರು. ಗಂಡು ಮತ್ತು ಹೆಣ್ಣು ಕತ್ತೆಗೆ ಬಾಸಿಂಗ ಕಟ್ಟಿ, ಕೊರಳಿಗೆ ಹೂಮಾಲೆ ಹಾಕಿ ಮದುಮಕ್ಕಳಂತೆ ಸಿಂಗರಿಸಿದ್ದರು. ತಾಳಿ ಕಟ್ಟುವ ಶಾಸ್ತ್ರವೂ ನಡೆಯಿತು.

‘ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುವಾ’ ಎಂದು ಸ್ವಾಮಿಯೊಬ್ಬರು ಮದುವೆ ಮಂತ್ರ ಹೇಳಿದರು. ಜನರು ಅಕ್ಷತೆ ಹಾಕಿ ಮುತ್ತೈದೆಯರು ಸೋಬಾನೆ ಹಾಡು ಹೇಳಿ ಆರತಿ ಮಾಡಿ ಹರಿಸಿದರು. ಬಾಜಾ ಭಜಂತ್ರಿ, ಡಿಜೆ ಸೌಂಡಿನೊಂದಿಗೆ ಅಬ್ಬರದಿಂದ ಅಲ್ಲಿಯೇ ಮೆರವಣಿಗೆ ಮಾಡಿದರು.

ಸ್ಥಳೀಯ ಬಡಕಂಬಿ, ಸೋನಕರ, ವನಜೋಳಿ, ಚವ್ಹಾಣ, ಸೂರ್ಯವಂಶಿ, ಮಾಳಿ ಬಂಧುಗಳೆಲ್ಲ ಮದುವೆಗೆ ಸಾಕ್ಷಿಯಾಗಿದ್ದರು. ಕತ್ತೆಗಳಿಗೂ ವಸ್ತ್ರ ಸಿಂಗಾರ ಮಾಡಿ ನೆರೆದ ಮುತ್ತೈದೆಯರು ಆರತಿ ಮಾಡಿದರು, ನಂತರ‌ ಮದುವೆಯಲ್ಲಿ ಭಾಗಿಯಾದವರಿಗೆ ಶಿರಾ, ಅನ್ನ, ಸಾರು ಭರ್ಜರಿಯಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಈ ಮದುವೆ ಸಂಭ್ರಮದಲ್ಲಿ ಗ್ರಾಮ ಪಂ ಸದಸ್ಯ ಪರಶುರಾಮ ಸೋನಕರ, ಭರಮು ಸೋನಕರ ಮುಖಂಡರಾದ ಹಣಮಂತ ವನಜೋಳಿ, ಮಹಾವೀರ ದಾನವಾಡ, ಕೇದಾರಿ ಬಡಕಂಬಿ, ಪ್ರವೀಣ ಸೂರ್ಯವಂಶಿ, ಸಂಜು ವನಜೋಳಿ, ಸಿದ್ದು ಮಾಳಿ, ದೀಪಕ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News