ಮುರಗೋಡ: ಕೃಷಿ ಅಧಿಕಾರಿಗಳ ಮಾರ್ಗದರ್ಶನದಂತೆ ಬಿತ್ತನೆಗೆ ಮುಂಚೆ ಬೀಜೋಪಚಾರ ಮೊಳಕೆಯ ನಂತರ ಬೇವಿನ ಎಣ್ಣಿಯ ಸಿಂಪರಣೆ ಮಾಡಿದರೆ ಹಿಂಗಾರಿ ಬೆಳೆಗಳಾದ ಕಡಲೆ, ಜೋಳ ಮತ್ತು ಗೋಧಿ ಬೆಳೆಗಳನ್ನು ಕಡಿಮೆ ಬಂಡವಾಳದಲ್ಲಿ ಅಧಿಕ ಇಳುವರಿ ಪಡೆದು ರೈತರು ಕೈ ತುಂಬ ಆದಾಯ ಪಡೆದುಕೊಳ್ಳಬಹುದಾಗಿದೆ ಎಂದು ರೈತ ಮುಖಂಡ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಮುರಗೋಡ ಕೃಷಿ ಕೇಂದ್ರದಲ್ಲಿ ಗುರುವಾರ ಹೋಬಳಿ ರೈತರಿಗೆ ಸರ್ಕಾರದ ರಿಯಾಯಿತಿ ದರದಲ್ಲಿ ಪೊರೈಸಿದ ಕಡಲೆ, ಜೋಳ ಹಾಗೂ ಗೋಧಿ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಹೆಚ್ಚಿನ ಇಳುವರಿ ಆಸೆಗೆ ಅವೈಜ್ಞಾನಿಕ ಕ್ರಮಗಳೊಂದಿಗೆ ತುಟ್ಟಿದರದ ರಸಾಯನಿಕ ಔಷಧಿ ಖರೀದಿಸಿ ಬಳಸಿದರು ಇಳುವರಿ ಕುಂಟಿತವಾಗಿ ರೈತ ಸಾಲಗಾರರಾಗುತಿದ್ದಾರೆ. ಕೃಷಿ ಕೇಂದ್ರದಲ್ಲಿ ನುರಿತ ಅನುಭವಿ ಕೃಷಿ ಅಧಿಕಾರಿಗಳಿದ್ದು ಅವರ ಮಾರ್ಗದರ್ಶನದಲ್ಲಿ ಹೊಸ ಆವಿಷ್ಕಾರಗಳ ಅನುಭವವನ್ನು ತಗೆದುಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆದು ರೈತರು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಗಪ್ಪ ಬೆಳಗಾವಿ ಮಾತನಾಡಿ, ರೈತರಿಗೆ ಬಿತ್ತನೆಗಿಂತ ಮುಂಚಿತವಾಗಿ ಸರಿಯಾದ ಸಮಯಕ್ಕೆ ಬಿತ್ತನೆ ಬೀಜಗಳು ಪೊರೈಕ ಮಾಡುತ್ತಿರುವ ಅಧಿಕಾರಿಗಳ ಕ್ರಮ ಶ್ಲಾಘನೀಯ ಎಂದರು.
ಕೃಷಿ ಅಧಿಕಾರಿಗಳಾದ ಮಹಾಂತೇಶ ವೀರಕ್ತಮಠ, ಮಧುಸುಧನ ಅಮ್ಟೆ ಹಾಗೂ ಎಸ್.ಎಸ್.ಸಾಲಹಳ್ಳಿ ಮಾತನಾಡಿ, ಸರ್ಕಾರ ಸಕಾಲಕ್ಕೆ ರೈತರಿಗೆ ಕೃಷಿ ಉತ್ತೇಜನಕ್ಕಾಗಿ ರಿಯಾಯತಿ ದರದಲ್ಲಿ ಬೀಜ, ಪೊಷಕೌಂಷಗಳು, ಔಷಧಿ ಹಾಗು ರಸಗೊಬ್ಬರ ಕೃಷಿ ಪರಿಕರಗಳನ್ನು ಅತ್ಯಂತ ಕಡಿಮೆ ದರದಲ್ಲಿ ರೈತರಿಗೆ ನೀಡುತಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಈ ಕೆ ವಾಯ್ ಸಿ ಮಾಡಲು ರೈತರು ಅಸಕ್ತಿವಹಿಸಬೇಕು ಎಂದರು.
ಅತ್ಮ ಯೋಜನೆ ಸಂಯೋಜಕಿ ಶ್ವೇತಾ ಕೋಟಗಿ ಸ್ವಾಗತಿಸಿ ನಿರೂಪಿಸಿದರು.