ಬೆಳಗಾವಿ :
ರಾಜ್ಯ ಬಜೆಟ್ ನಲ್ಲಿ ಸರಕಾರ ರೈತರ ಬೇಡಿಕೆ ಹಾಗೂ ಹಕ್ಕುಗಳ ಮೇಲೆ ಮಂಡಿಸಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ರೈತರ ಬದುಕು ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ತತ್ತರಿಸಿ ಹೋಗಿದೆ. ಕಳೆದೊಂದು ವರ್ಷದಿಂದ ಭೀಕರ ಬರಗಾಲ ಎದುರಾಗಿದೆ. ರೈತರಿಗೆ ಸರಕಾರ ಒಂದು ಎಕರೆ ಜಮೀನಿಗೆ ಮೂರು ಸಾವಿರ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಸಾಲಮನ್ನಾ ಮಾಡುವ ಜವಾಬ್ದಾರಿಯನ್ನು ಎಲ್ಲ ಶಾಸಕರು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಶಾಸಕರೇ ಹೊಣೆಗಾರರಾಗುತ್ತಾರೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ, ಶುಗರ್ ಕಮಿಷನರ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯನ್ನು ಸದೃಢಗೊಳಿಸಬೇಕು. ಇದರಲ್ಲಿ ವಿಫಲವಾದರೆ ಶಾಸಕರ ಗೌರವ ಧನವನ್ನು ರೈತ ಪರಿಹಾರಕ್ಕೆ ವಿನಿಯೋಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಚುನಪ್ಪಾ ಪೂಜಾರಿ, ಪ್ರಕಾಶ ನಾಯಕ, ಸುರೇಶ ಪರಗನ್ನವರ, ಕಿಶನ್ ನಂದಿ, ರಮೇಶ ವಾಲಿ, ಬಬನ ಮಲೈ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.