ಬೆಳಗಾವಿ: ಕರ್ನಾಟಕ ವಿಧಾನಸಭೆ ಅಧಿವೇಶನದ ಮೊದಲ ದಿನದ ಸಭೆಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಅವರು ಅಗಲಿದ ಗಣ್ಯರಿಗೆ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಸಂತಾಪ ಸೂಚಿಸಿದರು.
ಹಿರಿಯ ರಾಜಕಾರಣಿಗಳಾದ ಶ್ರೀ ಡಿ.ಬಿ ಚಂದ್ರೇಗೌಡರಿಗೆ, ಶ್ರೀರಂಗ ದೇವರಾಯಲುರವರಿಗೆ, ಶ್ರೀ ವೆಂಕಟೇಶಪ್ಪನವರಿಗೆ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣನವರಿಗೆ, ಶ್ರೀ ವಿಲಾಸ್ ಬಾಬು ಆಲಮೇಲಕರ್, ಶ್ರೀ ಪಿ.ಬಿ ಆಚಾರ್ಯರವರಿಗೆ ಹಾಗೂ ಉಗ್ರರ ದಾಳಿಗೆ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಸೇರಿದಂತೆ ನಾಲ್ವರು ಸೈನಿಕರಿಗೆ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಾಲಿ ಜನಾರ್ಧನ ರೆಡ್ಡಿ, ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಶ್ರೀ ಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವನ್ನು ಇಡೀ ವಿಶ್ವವೇ ನೋಡುವ ರೀತಿ ಮಾಡುವ ಸಲುವಾಗಿ ಅವರ ವಂಶಸ್ಥರಾದ ಶ್ರೀರಂಗ ದೇವರಾಯಲುರವರ ಸಲಹೆ ಪಡೆಯಲು ತೆರಳಿದ್ದಾಗ, ಸತತವಾಗಿ ಸುಮಾರು 3 ತಿಂಗಳುಗಳ ಕಾಲ ಅವರು ನನ್ನೊಡನೆ ಸಂಪರ್ಕದಲ್ಲಿದ್ದು ಕಾರ್ಯಕ್ರಮದ ಕುರಿತು ಎಲ್ಲಾ ರೂಪುರೇಷೆಗಳನ್ನು ತಯಾರಿಸಲು ಸಹಕಾರ ನೀಡಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತಿಸುವ ಜವಾಬ್ದಾರಿಯನ್ನು ಅವರು ನನಗೆ ವಹಿಸಿಕೊಟ್ಟಿದ್ದರು. ಆದರೆ, ಅವರು ಸ್ವತಃ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಲಿಲ್ಲ. ಅವರ ಈ ನಿಷ್ಠೆ ಮತ್ತು ಸಮರ್ಪಣೆ ನನ್ನನ್ನು ಬಹಳವಾಗಿ ಪ್ರಭಾವಿಸಿತು. ಅವರು ರಾಜವಂಶಸ್ಥರೆನ್ನದೆ ಸಾಮಾನ್ಯ ವ್ಯಕ್ತಿಯಾಗಿ ಜನಪ್ರತಿನಿಧಿಯಾಗಿ, ಸಚಿವರಾಗಿ, ಶಾಸಕರಾಗಿ ಜನತೆಯ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಅವರ ನೆನಪು ನಮ್ಮೆಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಲಿದೆ" ಎಂದು ಹೇಳಿದರು.
ಗಾಲಿ ಜನಾರ್ಧನ ರೆಡ್ಡಿ ಅವರು ಈಗಾಗಲೇ ಗಂಗಾವತಿಯ ಆನೆಗುಂದಿಯಲ್ಲಿ ಶ್ರೀರಂಗ ದೇವರಾಯಲುರವರ ಹೆಸರಿನಲ್ಲಿ ವೃತ್ತವನ್ನು ಉದ್ಘಾಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪುತ್ತಳಿಯನ್ನು ಸಹ ಅನಾವರಣಗೊಳಿಸಲಾಗುವುದು ಎಂದು ತಿಳಿದುಬಂದಿದೆ.