ಬೆಳಗಾವಿ : ಕಬ್ಬಿಗೆ ಪ್ರತಿ ಟನ್ ಗೆ 5,500 ರೂ. ನಿಗದಿ ಪಡಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲಾಡಳಿತ ಮತ್ತು ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಜತೆ ಚರ್ಚಿಸಿ ಬೆಲೆ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ರೈತರ ಕಬ್ಬಿನಿಂದ 1 ಟನ್ ಗೆ ಸರಕಾರ ತೆರಿಗೆ ರೂಪದಲ್ಲಿ ಸುಮಾರು 4,500 ರೂ ತೆರಿಗೆ ಸಂದಾಯವಾಗುತ್ತಿರುವುದರಿಂದ ರೂ. 2,000 ಪರ ಟನ್ ಗೆ ರೈತರಿಗೆ ಸಹಾಯ ಧನ ರೂಪದಲ್ಲಿ ಸರಕಾರ ನೀಡಬೇಕು. ಕಾರ್ಖಾನೆಯವರು 3,500 ರೂ. ಕೊಡಬೇಕು. ಕಳೆದ 10 ವರ್ಷಗಳಿಂದ ಬೆಲೆ ಏರಿಕೆಯಾಗಿಲ್ಲ. ರೈತರ ಬದುಕು ಸಾಗಿಸುವುದೇ ದುಸ್ಥರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಖಾಸಗೀಕರಣ ಜಾರಿಗೆ ತರಲು ಹೊರಟಿರುವ ಸರಕಾರದ ನೀತಿಯನ್ನು ಖಂಡಿಸುತ್ತೇವೆ. ರೈತರ ನೀರಾವರಿ ವ್ಯವಸ್ಥೆಗೆ ಮೀಟರ್ ಅಳವಡಿಕೆ ಮತ್ತು ಕರೆನ್ಸಿ ಚಿಪ್ ಅಳವಡಿಕೆ ಮಾಡುವುದು ಬೇಡ. ರೈತರಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡದೆ ಇರುವುದು ರೈತ ವಿರೋಧಿ ಅನುಸರಿಸುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.
ಅತೀವೃಷ್ಟಿ ಮತ್ತು ಅನಾವೃಷ್ಟಿ 2019 ರಿಂದ ನಿರಂತರವಾಗಿ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡಿದ್ದು ಬೆಳೆ ಸಂಪೂರ್ಣ ನಾಶವಾಗಿದ್ದು ರೈತರ ಬದುಕು ಸಾಲದ ಸುಳಿಯಲ್ಲಿದ್ದು ರೈತರ ಭೂಮಿ ಫಲವತ್ತತೆ ಸಂಪೂರ್ಣ ಹಾಳಾಗಿದ್ದು, ಬೆಳೆ ಪರಿಹಾರ ಮನೆ ಪರಿಹಾರ ಕೊಡುವಲ್ಲಿ ಸಂಪೂರ್ಣ ಸರ್ಕಾರ ವಿಫಲವಾಗಿದ್ದು ತತಕ್ಷಣ ಪರಿಹಾರ ಕೊಡಬೇಕು ಅಂತ ಸಂಕಷ್ಟದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರಿಗೆ ಮರಳಿ ಸಹಾಯ ಧನವಾಗಿ ಸಾಲ ನೀಡಬೇಕೆಂದು ಒತ್ತಾಯಿಸಿದರು.
ಚೂನಪ್ಪ ಪೂಜಾರಿ, ಶಿವಾನಂದ ಮುಗಳಿಹಾಳ, ಮಲ್ಲಿಕಾರ್ಜುನ ರಾಮದುರ್ಗ, ಗಣೇಶ ಇಳಗೇರಿ, ರಾಘವೇಂದ್ರ ನಾಯಿಕ, ರವಿ ಸಿದ್ಧಮ್ಮನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.