ಬೆಳಗಾವಿ : ಹೋರಾಟದ ಶಕ್ತಿ ಕೇಂದ್ರ ಬೆಳಗಾವಿ. ಬೆಳಗಾವಿಗೆ ಬರುವ ಕಾರ್ಯಕ್ರಮ ಹುಬ್ಬಳ್ಳಿ- ಧಾರವಾಡನಲ್ಲಿ ಆಯೋಜಿಸಿದರೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು.
ಭಾನುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿಗೆ ನಮ್ಮ ವಿರೋಧ ಇಲ್ಲ. ಆದರೆ ಬೆಳಗಾವಿಯಲ್ಲಿ ಆಗಬೇಕಿದ್ದ ಕಾರ್ಯಕ್ರಮ ಹುಬ್ಬಳ್ಳಿ-ಧಾರವಾಡದಲ್ಲಿ ಸರಕಾರ ಆಯೋಜನೆ ಮಾಡಿ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರಕಾರದ ಬೆಳಗಾವಿ ಜಿಲ್ಲೆಯಲ್ಲಿರುವ ಶಾಸಕರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ. ಕಳೆದ ಬಾರಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸುವ ಬದಲು ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಿ ಅನ್ಯಾಯ ಮಾಡಿದಾಗಲೂ ಧ್ವನಿ ಎತ್ತಲಿಲ್ಲ. ಈಗಲೂ ಬೆಳಗಾವಿಯಲ್ಲಿ ಆಯೋಜಿಸಬೇಕಿದ್ದ ಟೆಕ್ಲೆರೆಥಾನ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸಂಬಂಧಿಸಿದ ಟೆಕ್ಲೆರೆಥಾನ್ ಕಾರ್ಯಕ್ರಮ ಇಲ್ಲಿಯೇ ಮಾಡಬೇಕು. ಆದರೆ ಸಿಎಂ ಬೊಮ್ಮಾಯಿ ಅವರು ಹುಬ್ಬಳ್ಳಿಯವರಾಗಿರುವುದರಿಂದ ಅಲ್ಲಿ ಮಾಡಿ ಬೆಳಗಾವಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಬೆಂಗಳೂರು ನಿಂದ ಹುಬ್ಬಳ್ಳಿಯವರಗೆ ಬುಲೆಟ್ ರೈಲು ಪ್ರಾರಂಭ ಮಾಡುತ್ತಿದ್ದಾರೆ. ಬೆಳಗಾವಿಯವರೆಗೂ ಮಾಡಲು ಏಕೆ ಸಾಧ್ಯವಾಗಲಿಲ್ಲ ಸರಕಾರಕ್ಕೆ ಎಂದ ಅವರು, ಅನುಕಂಪ ಮತ್ತು ಭಾವನಾತ್ಮಕ ಆಧಾರದ ಮೇಲೆ ಬೆಳಗಾವಿ ಜನರು ಮತ ಕೊಟ್ಟರೆ ಸಂಸದರೂ ಬೆಳಗಾವಿ ಅಭಿವೃದ್ಧಿಯಲ್ಲಿ ಯಾವುದೇ ಕೊಡುಗೆ ಇಲ್ಲ ಎಂದರು.
ನಾನಾವಾಡಿಯಲ್ಲಿರುವ ಸಂಸದರಿಗೆ ಸಂಬಂಧಿಸಿದ ಕಾಲೇಜಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಅಲ್ಲಿಯೇ ಪಕ್ಕದಲ್ಲಿರುವ ಬೆಳಗುಂದಿ ರಸ್ತೆ ಅಭಿವೃದ್ಧಿಯಾಗಿಲ್ಲ. ಬೆಳಗಾವಿ ಬಿಜೆಪಿ ಸಂಸದೆ ಹಾಗೂ ಬೆಳಗಾವಿ ಸ್ಥಳೀಯ ಶಾಸಕರು ಕೇವಲ ಭೂ ಕಬಳಿಕೆ ಹಾಗೂ ವೈಯಕ್ತಿಕ ಸಾಮ್ರಾಜ್ಯ ಮಾಡಿಕೊಳ್ಳುತ್ತ ಸಾಗಿದ್ದಾರೆ. ಸರಕಾರದ ವಿರುದ್ಧ ಗಟ್ಟಿ ಧ್ವನಿ ಎತ್ತುವ ದೈರ್ಯ ಇಲ್ಲ ಎಂದರು.
ಕಳೆದ ತಿಂಗಳು ಬೆಳಗಾವಿ ನಗರದಲ್ಲಿ ತಂತ್ರಜ್ಞಾನ ಸಂಬಂಧಿಸಿದ ಸಮಾವೇಶ ಮಾಡಿ 300 ಜನ ಭಾಗಿಯಾಗಿದ್ದರು. ಹುಬ್ಬಳ್ಳಿಯಲ್ಲಿ ಮಾಡುವ ಕಾರ್ಯಕ್ರಮ ಸರಕಾರ ಇಲ್ಲಿಯೇ ಮಾಡಿದ್ದರೇ ಯಶಸ್ವಿಯಾಗುತ್ತಿತ್ತು ಎಂದರು.
ಶಂಕರ ಹೆಗಡೆ, ಸುದರ್ಶನ ತಹಶೀಲ್ದಾರ, ಬಶೀರ ಅಹ್ಮದ ಜಮಾದಾರ, ಎಂ.ಕೆ.ಸೈಯದ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.