ಅಥಣಿ : ಕಳೆದ 27 ದಿನಗಳಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೇವೆ ಖಾಯಂಗಾಗಿ ಧರಣಿ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಈ ದಿನ ರಕ್ತದಾನ ಮಾಡಿ ಗಮನ ಸೆಳೆದರು.ತಹಸೀಲ್ದಾರ ಕಚೇರಿ ಆವರಣದಲ್ಲಿ ಧರಣಿ ಸ್ಥಳದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿದರು.
ಹಿರಿಯ ಉಪನ್ಯಾಸಕ ಪಿ ಎಲ್ ಪೂಜಾರಿ ಮಾತನಾಡಿ, ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹದಲ್ಲಿ ನಮ್ಮ ಅಥಣಿ ತಾಲೂಕಿನ ಸ್ನೇಹಿತರು ವಿಭಿನ್ನ ಮಾದರಿಯಲ್ಲಿ ಧರಣಿ ಮಾಡುತ್ತಿದ್ದು ಇಂದು ರಕ್ತದಾನ ಮಾಡಿ ಸತ್ಯಾಗ್ರಹ ಮಾಡುತ್ತಿದ್ದಾರೆ.
ಇಂದು ಪ್ರೊ.ಮಹೇಶ ಮಡಿವಾಳ, ಪ್ರೊ.ಎಸ್. ಆರ್.ಗಡದೆ,ಪ್ರೊ.ಕೆ.ಎಸ್.ಬಿಜ್ಜರಗಿ,ಪ್ರೋ ಶಿವಾನಂದ ಮಟ್ಟೇಪ್ಪನವರ, ಪ್ರೋ. ಸುನಂದಾ ಹಿಪ್ಪರಗಿ,ಪ್ರೊ. ರಾಜೇಶ ಕೆರೂರ, ಪ್ರೊ.ಡಿ.ಎ.ಸ್ವಾಮಿ, ಪ್ರೊ.ಬಿ.ಎಸ್. ಬಿದರೊಳ್ಳಿ ಸೇರಿದಂತೆ ಹಲವರು ರಕ್ತದಾನ ಮಾಡಿದ್ದಾರೆ. .ಸುಮಾರು 20-25 ವರ್ಷಗಳಿಂದ ಸರಕಾರ ಸರ್ಕಾರಿ ಕಾಲೇಜುಗಳಲ್ಲಿ ನಮ್ಮನ್ನು ದುಡಿಸಿಕೊಳ್ಳುತ್ತಿದೆ. ನಾವು ಸರ್ಕಾರಕ್ಕೆ ರಕ್ತ ಕೊಟ್ಟೇವು ಹೊರತು - ಖಾಯಮಾತಿ ಬೇಡಿಕೆ ಬಿಡುವುದಿಲ್ಲ ಖಾಯಂ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಸುಮಾರು ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಜಾಣ ಕುರುಡನಂತೆ ಮೌನ ವಹಿಸಿ ವರ್ತಿಸುತ್ತಿರುವುದು ನಮ್ಮನ್ನು ಆತಂಕಕ್ಕೀಡುಮಾಡಿದೆ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ತೀವ್ರ ಮಾಡುತ್ತೇವೆ ಎಂದು ಎಚ್ಚರಿಸಿದ ಅವರು ಮಾನವೀಯತೆಗೆ ಸಾಮಾಜಿಕ ನ್ಯಾಯಕ್ಕೆ ಹೆಸರಾದ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.
ಉಪನ್ಯಾಸಕ ಆರ್ ಎಸ್ ಅಂಬಿ ಮಾತನಾಡಿ ಉಪನ್ಯಾಸಕರಿಗೆ ಕೇವಲ ವಿದ್ಯಾದಾನ ಮಾಡುವುದಷ್ಟೇ ಅಲ್ಲ ರಕ್ತದಾನ ಮಾಡುವುದು ನಮಗೆ ಗೊತ್ತು ಕಳೆದ ಒಂದು ತಿಂಗಳಿಂದ ವಿವಿಧ ರೀತಿಯಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ, ಇಂದು ರಕ್ತದಾನಮಾಡುವ ಮೂಲಕ ನಾವು ಪ್ರತಿಭಟನೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧರಾಗಿದ್ದೇವೆ.ಹೀಗೆ ನಾವು ವಿವಿಧ ರೀತಿಗಳಲ್ಲಿ ಪ್ರತಿಭಟನೆಗಳನ್ನುಮಾಡುತ್ತಿದ್ದರೂ ಸಹ ಸರ್ಕಾರ ಮಾತ್ರ ಬಾಯಿ ಬಿಡುತ್ತಿಲ್ಲ ಏನೇ ಆದರೂ ನಾವು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವವರೆಗೂ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.ಹಿರಿಯ ಉಪನ್ಯಾಸಕ ಎಸ್ ಎಸ್ ದೇವರೆಡ್ಡಿ ಮಾತನಾಡಿ ಎಲ್ಲ ಅರ್ಹತೆಗಳಿದ್ದರೂ ನಮಗೆ ಸರ್ಕಾರದ ಕೆಲಸ ಸಿಗದೇ ನಮ್ಮ ವಯಸ್ಸಿನ ಬಹುಭಾಗವನ್ನು ಕಳೆದ ನಮಗೆ ಕೊನೆಯ ದಿನಗಳಲ್ಲಾದರೂ ನೆಮ್ಮದಿಯ ಜೀವನ ಮಾಡಲು ಸರ್ಕಾರ ನಮ್ಮನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಅಥಣಿ, ಕೊಕಟನೂರು, ಐನಾಪುರ ತೆಲಸಂಗ ಕಾಲೇಜಿನ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.
ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಬೆಂಬಲ ವ್ಯಕ್ತ : ಕಳೆದ ಒಂದು ತಿಂಗಳಿಂದ ವಿವಿಧ ರೀತಿಯಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ , ಇಂದು ರಕ್ತದಾನಮಾಡುವ ಮೂಲಕ ತಾವು ಕಷ್ಟದಲ್ಲಿದ್ದರೂ ಸಮಾಜಕ್ಕೆ ಒಳ್ಳೆಯದನ್ನೇ ಮಾಡಿದ್ದಾರೆ.ಸರಕಾರಿ ನೌಕರರಿಗೆ ಸಮಾನ ಕೆಲಸ ಮಾಡಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ ಅವರ ಪ್ರತಿಭಟನೆ ನ್ಯಾಯಯುತವಾಗಿದೆ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಹೇಳಿದರು.