ಬೆಳಗಾವಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಲ್ಲ. ನೇರ ಪಾವತಿಯಡಿ 958, ಹೊರಗುತ್ತಿಗೆ ಅಡಿ 774 ಹಾಗೂ 388 ಖಾಯಂ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್.ಬಿ.ಎಸ್. ಹೇಳಿದರು.
ಶುಕ್ರವಾರದ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಕರ್ನಾಟಕ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮ 2011ರ ಪ್ರಕಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ 1470 ಪೌರ ಕಾರ್ಮಿಕರ ಹುದ್ದೆಗಳು ಇವೆ. ಸದ್ಯ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 134 ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.
ಹುಬ್ಬಳ್ಳಿ-ಧಾರವಾಡ 11.60 ಲಕ್ಷ ಜನಸಂಖ್ಯೆ ಹೊಂದಿದೆ. ಸುಮಾರು 2800 ಕಿ.ಮೀ ರಸ್ತೆಗಳಿವೆ. ಪ್ರತಿನಿತ್ಯ 3 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಈ ಕಾರ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪೌರ ಕಾರ್ಮಿಕರ ಅಗತ್ಯವಿದೆ. ಐ.ಪಿ.ಡಿ ಸಾಲಪ್ಪ ನವರ ವರದಿ ಪ್ರಕಾರ 500 ಜನಸಂಖ್ಯೆ ಒಬ್ಬ ಪೌರ ಕಾರ್ಮಿಕರನ್ನು ಸರ್ಕಾರ ನೇಮಿಸಬೇಕು. ಸದ್ಯ ನೇರಪಾವತಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಸಚಿವರಲ್ಲಿ ಕೋರಿದರು.
ಶಾಸಕರ ಕೋರಿಗೆ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಹುಬ್ಬಳ್ಳಿ ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಕಾರವಾರ ರಸ್ತೆಯ ಕೆಂಪಕೆರೆಯಲ್ಲಿ ಕಳೆದ 40 ರಿಂದ 50 ವರ್ಷಗಳ ಕಾಲ ಸಂಗ್ರಹ ಮಾಡಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯನ್ವಯ ಈ ತಾಜ್ಯವು 3.6 ಲಕ್ಷ ಟನ್‌ಗೂ ಅಧಿಕವಾಗಿದೆ. ಇದನ್ನು ವಿಲೇವಾರಿ ಮಾಡಿ 19 ಎಕರೆ ಪ್ರದೇಶವನ್ನು ಮುಕ್ತಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಸಚಿವ ಸುರೇಶ್.ಬಿ.ಎಸ್. ಹೇಳಿದರು.