ಬೈಲಹೊಂಗಲ : ವಿಶ್ವದಲ್ಲಿಯೇ ಭಾರತವನ್ನು ತಲೆ ಎತ್ತಿ ನೋಡುವಂತೆ ಮಾಡಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಕೈ ಮತ್ತಷ್ಟು ಬಲಿಷ್ಠ ಮಾಡುವ ಅವಕಾಶ ನಮಗೆಲ್ಲ ಮತ್ತೊಮ್ಮೆ ಒದಗಿ ಬಂದಿದ್ದು, ಈ ಸಲ 400 ಕ್ಕೂ ಅಧಿಕ ಸಂಸದರ ಆಯ್ಕೆ ಮಾಡಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡಲು ನಾವೆಲ್ಲ ಶ್ರಮಿಸಬೇಕಿದೆ ಎಂದು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಅವರು ಪಟ್ಟಣದ ಪೃಥ್ವಿ ಗಾರ್ಡನದಲ್ಲಿ ಲೋಕಸಭಾ ಚುನಾವಣೆಯಾರ್ಥ ನಡೆದ ಬಹಿರಂಗ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿ, ಕಳೆದ 10 ವರ್ಷಗಳ ಹಿಂದಿನ ಭಾರತಕ್ಕೂ ಈಗೀನ ಭಾರತಕ್ಕೂ ಬಹಳ ವ್ಯತ್ಯಾಸವಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದು ಅಭಿವೃದ್ಧಿ ಕಾಣಲಿಲ್ಲ ಆದರೆ ನರೇಂದ್ರ ಮೋದಿ ಅವರ ಕಳೆದ 10 ವರ್ಷಗಳ ಆಡಳಿತಾವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೇಶ ಅಭಿವೃದ್ಧಿ ಕಂಡಿದೆ ಎಂದರು.
ಮೋದಿಯವರ ಆಡಳಿತದ ವೈಖರಿ ಇಡೀ ಜಗತ್ತಿಗೆ ಮಾದರಿಯಾಗಿದ್ದು, ವಿದೇಶಗಳ ಮುಖ್ಯಸ್ಥರು ಭಾರತದತ್ತ ಮುಖ ಮಾಡುತ್ತಿದ್ದಾರೆ. ತಮ್ಮೆಲ್ಲರ ಸಹಕಾರದಿಂದ ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಿದ್ದು ಬಿಜೆಪಿಯ ಭದ್ರ ಕೋಟೆಯಾದ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ ನೀಡುವ ಮೂಲಕ ಮೋದಿಯವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ನನ್ನ ಅಡ್ರೆಸ್ ಕೇಳೂವವರು ತಮ್ಮ ಅಡ್ರೆಸ ತಿಳಿಸಲಿ, ನಾನೂ ಬೆಳಗಾವಿಯ ಮನೆಮಗ, 10 ವರ್ಷದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದು ವಿರೋಧಿ ಬಣಕ್ಕೆ ಟಾಂಗ ನೀಡಿದರು.
ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಮಾತನಾಡಿ, ಮೂರನೇಯ ಬಾರಿಗೆ ಮೋದಿಯವರನ್ನು ಪ್ರಧಾನಿ ಮಾಡಲು ನಾವೆಲ್ಲ ಬೂತಮಟ್ಟದಿಂದ ಕೆಲಸ ಮಾಡಿ ಜಗದೀಶ ಶೆಟ್ಟರ ಅವರಿಗೆ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದಿಂದ ಹೆಚ್ಚಿನ ಬಹುಮತ ನೀಡಲು ಪ್ರಾಮಾಣಿಕವಾಗಿ ಶ್ರಮಿಸೋಣ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರವಾಗಿದೆ. ಪಂಚ ಗ್ಯಾರಂಟಿಯ ನೆಪದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಬಾಯಿ ಬಡೆದುಕೊಳ್ಳುತ್ತಿರುವ ಸಿದ್ದರಾಮಯ್ಯನವರು ರೈತರ ವಿಷಯದಲ್ಲಿ ನಿರ್ಲಕ್ಷ್ಯ ಯಾಕೆ ಮಾಡುತ್ತಿದ್ದಾರೆ. ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಕ್ಕಿರುವದು ನಮ್ಮೆಲ್ಲರ ಹೆಮ್ಮೆ ಅವರನ್ನು ನಾವೆಲ್ಲರೂ ಕೂಡಿ ಮೂರನೇಯ ಬಾರಿಗೆ ಅಧಿಕಾರಕ್ಕೆ ತರೋಣ ಎಂದರು.
ಮುಖಂಡರಾದ ಸಂಜಯ ಪಾಟೀಲ, ಸುಭಾಷ್ ಪಾಟೀಲ್, ಸಂಸದೆ ಮಂಗಲ ಅಂಗಡಿ, ನಾರಾಯಣ ಭಾಂಗಡೆ, ವಿಜಯ ಮೆಟಗುಡ್ಡ, ಗುರು ಮೆಟಗುಡ್ಡ , ಸುನೀಲ ಮರಕುಂಬಿ ಮುಂತಾದವರು ವೇದಿಕೆ ಮೇಲೆ ಇದ್ದರು.
ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಸ್ವಾಗತಿಸಿ, ವಂದಿಸಿದರು.
ವರದಿ : ರವಿಕಿರಣ್ ಯಾತಗೇರಿ