ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿ ಭರ್ಜರಿ ರೋಡ್ ಶೋ ನಡೆಸುವುದರ ಮೂಲಕ ಚುನಾವಣೆಯ ಕಹಳೆ ಮೊಳಗಿಸಿದ್ದಾರೆ. ಮಾ.20 ರಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚುನಾವಣೆಯ ಉತ್ಸಾಹ ತುಂಬಲಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೆಳಗಾವಿಯಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಹೊಂದಿವೆ. ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ, ಬೆಳಗಾವಿ ಗೆದ್ದರೆ ರಾಜ್ಯ ಗೆದ್ದಂತೆ ಎನ್ನುವಂತೆ ಕೇಂದ್ರದ ಘಟಾನುಘಟಿ ನಾಯಕರು ಬೆಳಗಾವಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಚುನಾವಣೆಯ ರಣಕಹಳೆ ಮೊಳಗಿಸುತ್ತಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ಹೋಗಿದ್ದಾರೆ. ಅತ್ತ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ನಡೆಸುವುದರ ಮೂಲಕ ಬೆಳಗಾವಿ ಜಿಲ್ಲೆಯಿಂದಲೇ ಚುನಾವಣೆಯ ರಣತಂತ್ರ ಹೆಣೆದಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಭರ್ಜರಿ ಪ್ರಜಾ ಧ್ವನಿ ಯಾತ್ರೆ ನಡೆಸಿದ್ದಾರೆ. ಆದರೆ ಮತದಾರ ಚಿತ್ತ ಯಾರತ್ತ ಎನ್ನುವುದು ಮಾತ್ರ ನಿಗೂಢವಾಗಿದೆ.
ಒಟ್ಟಾರೆ, ಕಾಂಗ್ರೆಸ್ ಯುವರಾಜನ ಆಗಮನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿದಂತೆ ಅನೇಕ ಜಿಲ್ಲಾ ನಾಯಕರು ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಬೃಹತ ಸಿದ್ಧತೆ ನಡೆಸಿದ್ದಾರೆ.